ಬೆಂಗಳೂರು, ಮೇ 07 (DaijiworldNews/SM): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಎಷ್ಟೇಹರಸಾಹಸ ನಡೆಸಿದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಸರಕಾರ ಕೂಡ ದೃಢ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗುತ್ತಿವೆ.
ಈಗಾಗಲೇ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಹಲವು ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ದಿನಕ್ಕೊಂದರಂತೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಜನರು ಕೂಡ ಗೊಂದಲಕ್ಕೀಡಾಗುತ್ತಿದ್ದಾರೆ. ಆರಂಭದಲ್ಲಿ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಒಂದಿಷ್ಟು ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಅದರ ಬೆನ್ನಲ್ಲೇ ಮತ್ತೆ ಲಾಕ್ ಡೌನ್ ಆದೇಶ ಜಾರಿಗೆ ತರಲಾಗಿದೆ. ಮೇ ೧೨ರ ತನಕ ಲಾಕ್ ಡೌನ್ ಜಾರಿಗೊಳಿಸಿ ಸರಕಾರ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಬೆಳಗ್ಗೆ ೬ರಿಂದ ೧೦ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲೇ ಜನರ ಸಂಚಾರ ಕೂಡ ಹೆಚ್ಚಾಗಿತ್ತು. ಇನ್ನು ಈ ಅವಧಿಯಲ್ಲಿ ನಿರ್ಬಂಧದ ಬಗ್ಗೆ ಸೂಕ್ತ ಉಲ್ಲೇಖಿಸಿಲ್ಲ. ಇದೇ ಕಾರಣದಿಂದ ಜನರಲ್ಲಿ ಗೊಂದಲಗಳಾಗಿವೆ. ಇದರ ಜೊತೆ ಜೊತೆಯಲ್ಲೇ ಮತ್ತೆ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ವಿಸ್ತರಿಸಿ ಮಧ್ಯಾಹ್ನ ೧೨ ಗಂಟೆ ತನಕ ಅವಕಾಶ ಕಲ್ಪಿಸಿ ಸರಕಾರ ಆದೇಶ ನೀಡಿತ್ತು.
ಈ ಎಲ್ಲಾ ನಿರ್ಧಾರಗಳ ಬಳಿಕ ಮೇ ೭ರಂದು ಮತ್ತೊಂದು ಹೊಸ ಆದೇಶ ಹೊರಡಿಸಲಾಗಿದ್ದು ರಾಜ್ಯಾದ್ಯಂತ ೧೪ ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಒಂದೆಡೆ ಮುಖ್ಯಮಂತ್ರಿಗಳು ಸಂಪೂರ್ಣ ಚಟುವಟಿಕೆಗಳು ಬಂದ್ ಎಂದಿದ್ದಾರೆ. ಆದರೆ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಹೇಳುವುದೇ ಬೇರೆ. ರಾಜ್ಯದಲ್ಲಿ ಲಾಕ್ ಡೌನ್ ಅಲ್ಲ, ಕೆಲವು ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಎನ್ನುವ ಮೂಲಕ ತಮ್ಮ ಜವಾಬ್ದಾರಿಯಿಂದ ನುನುಚಿಕೊಂಡಿದ್ದಾರೆ.
ಸದ್ಯ ಸರಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಕಳೆದ ಹತ್ತು ದಿನಗಳಿಂದ ಬಡ ವರ್ಗದ ಜನರು ಸಂಕಷ್ಟ ಅನುಭವಿಸಿದ್ದಾರೆ. ವಾಹನಗಳ ಮೂಲಕ ಸಂಚಾರಿಸುವವರು ಹಲವು ಸಬೂಬುಗಳನ್ನು ನೀಡಿ ಸಂಚರಿಸುತ್ತಾರೆ. ಆದರೆ, ಬಡವರ್ಗದವರಿಗೆ ಸಂಚಾರಿಸಲು ಅವಕಾಶವಿಲ್ಲದೇ ಇರುವುದುದರಿಂದ ವಿವಿಧೆಡೆಗಳಲ್ಲಿ ಕೆಲಸ ನಿರ್ವಹಿಸುವವರು ಕಷ್ಟಪಡುವಂತಾಗಿದೆ. ರಾಜ್ಯದ ಬಹುತೇಕ ಜನರಿಗೆ ಅದರಲ್ಲೂ ಬಡವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಸ್ ಸಂಚಾರವಿಲ್ಲದ ಹಿನ್ನೆಲೆ ಬಸ್ ನಲ್ಲಿ ದುಡಿಯುವ ಉದ್ಯೋಗಿಗಳು, ಕಾರ್ಮಿಕರು ಪರದಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ದಿನದ ಸಂಬಳವನ್ನೇ ನಂಬಿಕೊಂಡು ಲೆಕ್ಕಾಚಾರದ ಜೀವನವನ್ನು ಈ ವರ್ಗ ನಡೆಸುತ್ತಿದ್ದು, ಸರಕಾರ ಇವರಿಗೆ ಪರ್ಯಾಯ ಉಪಾಯ ನೀಡಿಲ್ಲ.
ಸರಕಾರ ಸಂಪೂರ್ಣ ಲಾಕ್ ಡೌನ್ ಎನ್ನುವ ಮಾತು ಹೇಳದಿರುವುದು ಇದೇ ಕಾರಣಕ್ಕೆ. ಒಂದೊಮ್ಮೆ ಪೂರ್ಣ ಲಾಕ್ ಡೌನ್ ಘೋಷಿಸಿದ್ದಲ್ಲಿ ಜನತೆಗೆ ಪ್ಯಾಕೇಜ್ ಘೋಷಿಸಬೇಕು. ಆದರೆ, ಸರಕಾರದ ಕೈಯಲ್ಲಿ ಇದಕ್ಕೆ ಬೇಕಾಗುವಷ್ಟು ಅನುದಾನ ಇಲ್ಲ ಎನ್ನಲಾಗುತ್ತಿದೆ. ಜನರಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಹಿನ್ನೆಲೆ ಮತ್ತೆ ಮತ್ತೆ ಲಾಕ್ ಡೌನ್ ಹೆಸರಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ.
ಸದ್ಯ ಸರಕಾರವೇ ಗೊಂದಲದಲ್ಲಿ ಇರುವ ರೀತಿ ಗೋಚರಿಸುತ್ತಿದೆ. ಮೊದಲು ಕಠಿಣ ನಿರ್ಧಾರ ಕೈಗೊಂಡು ಕೊರೋನಾ ನಿಯಂತ್ರಣದ ಜೊತೆಗೆ ಜನರ ಹಿತ ಕಾಪಾಡುವ ಜವಾಬ್ದಾರಿ ಸರಕಾರದ ಮೇಲಿದ್ದು, ಅದನ್ನು ನಿಭಾಯಿಸಬೇಕಾಗಿದೆ.