ಶಿವಮೊಗ್ಗ, ಮೇ 07 (DaijiworldNews/MB) : ಶಾಸಕ ಜಮೀರ್ ಅಹ್ಮದ್ ರಕ್ತದಲ್ಲೇ ಮುಸ್ಲಿಂ ಪರ, ಹಿಂದೂ ವಿರೋಧಿ ನೀತಿಯಿದೆ. ಅವರು ತಾವು ಮುಸ್ಲಿಂ ನಾಯಕ ಎಂದು ಸಾಬೀತು ಮಾಡಲು ಮುಂದಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜಮೀರ್ ಅವರ ಪಕ್ಷದ ನಾಯಕರೇ ಬೆಂಗಳೂರಿನ ಡಿ.ಜಿ.ಹಳ್ಳಿಯಲ್ಲಿ ಕೋಮು ಗಲಭೆ ಹಬ್ಬಿಸಿದ್ದು ಯಾರು ಎನ್ನುವುದನ್ನು ಹೇಳುತ್ತಾರೆ. ಜಮೀರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಸದ ತೇಜಸ್ವಿ ಸೂರ್ಯ ವಿರುದ್ಧವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ನಮಗೂ ಅವರಂತೆ ಮಾತನಾಡಲು ಬರುತ್ತದೆ'' ಎಂದು ಕಿಡಿಕಾರಿದರು.
''ಹಾಗೆಯೇ ಮುಸ್ಲಿಮರು ಮಾತ್ರ ಕಾಂಗ್ರೆಸ್ಗೆ ಮತ ಹಾಕಿಲ್ಲ. ಹಿಂದೂ ಸಮಾಜದ ಜನರೂ ಹಾಕಿದ್ದಾರೆ ಎಂಬುವುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು'' ಎಂದೂ ಹೇಳಿದರು.
''ಯಾವುದೇ ಜಿಲ್ಲೆಯಲ್ಲಿ ಜಿಲ್ಲೆಯ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿ ದಿನ 700ಕ್ಕೂ ಅಧಿಕ ಕೊರೊನಾ ರೋಗಿಗಳು ಪತ್ತೆಯಾಗುತ್ತಿರುವಾಗ ಇಲ್ಲಿಯ ಜನರಿಗೆ ಹಾಸಿಗೆಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಹಾಸಿಗೆಗಳು ಖಾಲಿ ಇದೆ ಎಂದು ಹೊರಗಿನಿಂದ ರೋಗಿಗಳು ಬರುವುದು ಅಧಿಕವಾಗಿದೆ. ಅದರಿಂದಾಗಿ ಸೋಂಕಿನ ಪ್ರಮಾಣವೂ ಅಧಿಕವಾಗಿದೆ. ಹೊರ ಜಿಲ್ಲೆಗಳಿಂದ ಹೆಚ್ಚು ರೋಗಿಗಳು ಮೆಗ್ಗಾನ್ಗೆ ಬರುತ್ತಿರುವುದನ್ನು ತಡೆಯಲು ಹಾಸಿಗೆ ಖಾಲಿ ಇಲ್ಲ ಎಂದು ಫಲಕ ಹಾಕಲಾಗಿದೆ'' ಎಂದು ಸ್ಪಷ್ಟನೆ ನೀಡಿದರು.
ಇನ್ನು ಇದೇ ವೇಳೆ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವುದನ್ನು ಈಶ್ವರಪ್ಪನವರು ಸಮರ್ಥಿಸಿಕೊಂಡಿದ್ದಾರೆ. ''ಮೋದಿ ಎಲ್ಲಾ ರಾಜ್ಯಗಳಿಗೆ ಆಕ್ಸಿಜನ್ ಪ್ರಮಾಣ ಹಂಚಿಕೆ ಮಾಡಬೇಕಾಗುತ್ತದೆ, ಹಾಗಾಗಿ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ'' ಎಂದು ಹೇಳಿದ ಅವರು, ''ಆಕ್ಸಿಜನ್ ಮನೆಯಲ್ಲಿ ಅಡುಗೆ ಮಾಡಿ ತಯಾರಿಸುವ ವಸ್ತುವೇನಲ್ಲ'' ಎಂದು ಹೇಳಿದರು.