ನವದೆಹಲಿ, ಮೇ 07 (DaijiworldNews/MB) : ''ದೇಶದಲ್ಲಿ ಕೊರೊನಾ ಕಾರಣದಿಂದಾಗಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಕೇಂದ್ರ ಸರ್ಕಾರ ದೇಶದ ಪರಿಸ್ಥಿತಿ ಹದಗೆಟ್ಟಿದ್ದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ'' ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಲವೆಡೆ ಲಸಿಕೆ, ಬೆಡ್, ಆಕ್ಸಿಜನ್ನ ಸಮಸ್ಯೆಗಳು ಉಂಟಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿರುವ ಚಿದಂಬರಂ ಅವರು, ''18 ರಿಂದ 44 ರ ನಡುವೆ ಯಾರಿಗೂ ಲಸಿಕೆ ಲಭ್ಯವಾಗುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಪ್ರಧಾನಿ ಮತ್ತು ಆರೋಗ್ಯ ಸಚಿವರು ಜವಾಬ್ದಾರಿಯನ್ನು ನಿರ್ವಹಿಸದೆ ಪ್ರಜಾಪ್ರಭುತ್ವ ತತ್ವಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ'' ಎಂದು ದೂರಿದ್ದಾರೆ.
''ಸಾಂಕ್ರಾಮಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಸಿಕೆಗಳ ಅಸಮರ್ಪಕ ಪೂರೈಕೆ ಕಠಿಣವಾದ ಹಾಗೂ ಕಹಿಯಾದ ಸತ್ಯ. ಆದರೆ ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂದು ಆರೋಪ ಮಾಡಿರುವ ಅವರು, ತಮಿಳುನಾಡಿನಲ್ಲಿ, 45 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮೊದಲ ಡೋಸ್ ಲಸಿಕೆ ದೊರೆಯುತ್ತಿಲ್ಲ. ಇನ್ನು ಎರಡನೇ ಡೋಸ್ ತೆಗೆದುಕೊಳ್ಳುವವರ ಸಂಖ್ಯೆ ಅತೀ ಕಡಿಮೆ'' ಎಂದು ತಿಳಿಸಿದ್ದಾರೆ.