ಮೈಸೂರು, ಮೇ 07 (DaijiworldNews/MB) : ''ಭಾರತವನ್ನು ವಿದೇಶಿ ಮಾಧ್ಯಮದಲ್ಲಿ ಬೆತ್ತಲಾಗುವಂತೆ ಕೊರೊನಾ ಎರಡನೇ ಅಲೆಯು ಮಾಡಿದೆ'' ಎಂದು ಹೇಳಿರುವ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಎಚ್.ವಿಶ್ವನಾಥ್, ''ದೇಶದಲ್ಲಿ ಕೊರೊನಾದಿಂದಾಗುವ ಸಾವು ತಡೆಯಲು, ಕೂಡಲೇ ದೇಶದಲ್ಲಿ ಲಾಕ್ಡೌನ್ ಮಾಡುವುದು ಉತ್ತಮ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಶುಕ್ರವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ''ಲಾಕ್ಡೌನ್ ಮಾಡುವುದು ಮಾತ್ರ ನಮಗೆ ಉಳಿದಿರುವ ಏಕೈಕ ದಾರಿ. ಪ್ರಸ್ತುತ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಬೆಳಗಾವಿಯಲ್ಲಿರುವ ಸುವರ್ಣಸೌಧವನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಮಾಡುವುದು ಒಳಿತು. ಅಲ್ಲಿಗೆ ಬೇಕಾದ ಕೆಲವು ಮೂಲ ಸೌಕರ್ಯ ಒದಗಿಸಿದರೆ, 2 ಸಾವಿರ ಹಾಸಿಗೆ ವ್ಯವಸ್ಥೆ ಮಾಡಬಹುದು ಇದರಿಂದಾಗಿ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ'' ಎಂದು ಸಲಹೆ ನೀಡಿದರು.
''ನಮಗೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮಾದರಿಯಾಗಬೇಕು. ಅಲ್ಲಿನ ಸರ್ಕಾರ ಕೊರೊನಾ ಪೀಡಿತರಿಗೆ ಸರ್ಕಾರಿ–ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಿ, ಅಗತ್ಯ ಸೌಲಭ್ಯವನ್ನು ಒದಗಿಸಿದೆ. ಅಲ್ಲಿನ ಸರ್ಕಾರಗಳು ಜನರ ಕಷ್ಟಕ್ಕೆ ಸ್ಪಂದಿಸಿದೆ'' ಎಂದು ಪರೋಕ್ಷವಾಗಿ ತಮ್ಮದೇ ಪಕ್ಷದ ಸರ್ಕಾರವನ್ನು ಕುಟುಕಿದರು.
ಇನ್ನು ಇದೇ ವೇಳೆ ''ಮುಖ್ಯಮಂತ್ರಿ ಅವರಿಗೆ ಪರಸ್ಪರ ವಾಕ್ಸಮರ ನಡೆಸುತ್ತಿರುವ ಮೈಸೂರು–ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಾಯಿ ಮುಚ್ಚಿ ತಮ್ಮ ಕೆಲಸ ಮಾಡಲು ಹೇಳುವ ಅಧಿಕಾರ ಇಲ್ಲವೇ'' ಎಂದು ಪ್ರಶ್ನಿಸಿದರು.
''ಮುಖ್ಯಮಂತ್ರಿ ಅವರಿಗೆ ಖಡಕ್ ಆಗಿ ಅಧಿಕಾರ ನಡೆಸಿ ಎಂದು ಹೇಳುವುದು ತಪ್ಪಾ'' ಎಂದು ಪ್ರಶ್ನಿಸಿದ ವಿಶ್ವನಾಥ್ ಅವರು, ''ಧೃತರಾಷ್ಟ್ರನಿಗೆ ವಿದುರ ಹೇಳಿದಂತೆ, ನಾನು ಯಡಿಯೂರಪ್ಪನಿಗೆ ಪುತ್ರ ವ್ಯಾಮೋಹ ಬಿಡಿ ಎಂದು ಹೇಳಿದ್ದೇನೆ'' ಎಂದರು.