ಮುಂಬೈ, ಮೇ 07 (DaijiworldNews/MB) : ''ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ರಾಜಕೀಯ ಹಿಂಸಾಚಾರವನ್ನು ಹತೋಟಿಗೆ ತಂದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರವಲ್ಲ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಕೂಡಾ ಹೌದು'' ಎಂದು ಹೇಳಿರುವ ಶಿವಸೇನೆ, ''ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಏನೋ ಮೋಸದಾಟ ನಡೆಸುತ್ತಿರುವಂತಿದೆ'' ಎಂದು ಅನುಮಾನ ವ್ಯಕ್ತಪಡಿಸಿದೆ.
ಶಿವಸೇನಾ ನಾಯಕ ಸಂಜಯ್ ರಾವತ್
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕದ ಬೆಳವಣಿಗೆಗಳ ಬಗ್ಗೆ ತಮ್ಮ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಕಟಿಸಿರುವ ಶಿವಸೇನೆ, ''ಬಂಗಾಳದಲ್ಲಿ ಪ್ರಜಾಪ್ರಭುತ್ವದ ಬದಲಾಗಿ ಆಡಳಿತದ ಬಲವೇ ಮೇಲುಗೈ ಹೊಂದಿದೆ ಎಂಬುವಂತೆ ಕಾಣಿಸುತ್ತಿದೆ. ಅಲ್ಲಿ ಏನು ನಡೆಯುತ್ತಿದೆ, ಇದರ ಹಿಂದೆ ಯಾರ ಕೈಗಳಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಿದೆ'' ಎಂದು ಹೇಳಿದೆ.
''ಬಿಜೆಪಿ ಹಿರಿಯ ನಾಯಕರೊಬ್ಬರು, ಪಶ್ಚಿಮ ಬಂಗಾಳದ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಅವರೇ ಹೊಣೆಗಾರರು ಎಂದು ಹೇಳಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಪಶ್ಚಿಮ ಬಂಗಾಳದ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ರಾಜ್ಯಪಾಲರಿಂದ ದೂರವಾಣಿ ಮೂಲಕ ಮಾಹಿತಿ ಕೇಳುತ್ತಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಅಲ್ಲಿ ಏನೋ ಮೋಸದಾಟ ನಡೆಯುತ್ತಿರುವಂತೆ ಕಾಣುತ್ತಿದೆ'' ಎಂದು ಅನುಮಾನ ವ್ಯಕ್ತಪಡಿಸಿದೆ.
''ಬಿಜೆಪಿ ಚುನಾವಣೆಯಲ್ಲಿ ಸೋತ ಬಳಿಕ ಬಂಗಾಳದಲ್ಲಿ ಹಿಂಸಾಚಾರದ ಸುದ್ದಿಯಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಆದರೆ ಮೃತ 17 ಮಂದಿಯಲ್ಲಿ ಒಂಬತ್ತು ಮಂದಿಗೆ ಬಿಜೆಪಿ ಸಂಪರ್ಕವಿದ್ದರೆ, ಉಳಿದವರೆಲ್ಲರೂ ಟಿಎಂಸಿ ಯವರು. ಹಾಗಿರುವಾಗ ಬರೀ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಸುಳ್ಳು. ಎರಡು ಪಕ್ಷದ ಕಾರ್ಯಕರ್ತರು ಘರ್ಷಣೆ ನಡೆಸಿದ್ದಾರೆ ಎಂಬುದು ಸತ್ಯ'' ಎಂದು ಶಿವಸೇನೆ ಅಭಿಪ್ರಾಯಿಸಿದೆ.