ಬೆಂಗಳೂರು, ಮೇ.07 (DaijiworldNews/HR): "ಕೊರೊನಾ ಸೋಂಕು ದೃಢಪಡಿಸುವುದಕ್ಕೆ ಸಿ.ಟಿ. ಸ್ಕ್ಯಾನಿಂಗ್ ಮತ್ತು ಡಿಜಿಟಲ್ ಎಕ್ಸ್ -ರೇ ಅವಶ್ಯಕತೆ ಇರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಲ್ಯಾಬ್ಗಳಲ್ಲಿ ಸಿಟಿ ಸ್ಕ್ಯಾನ್ಗೆ ಗರಿಷ್ಠ 1,500 ಹಾಗೂ ಡಿಜಿಟಲ್ ಎಕ್ಸ್ - ರೇಗೆ ಗರಿಷ್ಠ 250 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು, ಅದಕ್ಕಿಂತ ಅಧಿಕ ಹಣ ಪಡೆದರೆ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುಧಾಕರ್ ಆದೇಶ ಹೊರಡಿಸಿದ್ದು, ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿರುವ ಕುರಿತು ನಮಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ಗಾಗಿ ಒಂದೂವರೆ ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ" ಎಂದರು.
ಒಂದು ವೇಳೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಹಣ ಪಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸರಕಾರಿ ವ್ಯವಸ್ಥೆ ಅಡಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.