ನವದೆಹಲಿ, ಮೇ.07 (DaijiworldNews/PY): ಎಎಸ್ಐಯೋರ್ವರು ತಮ್ಮ ಪುತ್ರಿಯ ವಿವಾಹವನ್ನು ಮುಂದೂಡಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಶವಸಂಸ್ಕಾರ ನೆರವೇರಿಸುವ ಮಹಾಕಾರ್ಯವನ್ನು ಮಾಡುತ್ತಿದ್ದಾರೆ.
ದೆಹಲಿಯ ಲೋಧಿ ರಸ್ತೆಯಲ್ಲಿರುವ ನಿಜಾಮುದ್ದಿನ್ ಬರಾಕ್ನಲ್ಲಿ ಎಎಸ್ಐ ಆಗಿರುವ ರಾಕೇಶ್ ಕುಮಾರ್ (56) ಅವರ ಪುತ್ರಿಯ ವಿವಾಹ ಇಂದು ನಡೆಯಬೇಕಿತ್ತು. ಆದರೆ, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪುತ್ರಿಯ ವಿವಾಹವನ್ನು ಮುಂದೂಡಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವವರ ಶವಸಂಸ್ಕಾರ ಮಾಡುತ್ತಿದ್ದಾರೆ. ರಾಕೇಶ್ ಕುಮಾರ್ ಅವರು ಕಳೆದ 20 ದಿನಗಳಿಂದ ಶವಸಂಸ್ಕಾರ ಕಾರ್ಯ ನಡೆಸುತ್ತ ಬಂದಿದ್ದಾರೆ. ಈವರೆಗೆ 50 ಅನಾಥ ಶವಗಳಿಗೆ ಸಂಸ್ಕಾರ ನೆರವೇರಿಸಿರುವ ಅವರು, 1,100 ಶವಸಂಸ್ಕಾರಕ್ಕೆ ತಮ್ಮ ಕೈಲಾದ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಟ್ವೀಟ್ ಮಾಡಿದ್ದು, "ರಾಕೇಶ್ ಕುಮಾರ್ ಅವರು ಕಳೆದ ಎ.13ರಿಂದ ಈವರೆಗೆ ಸುಮಾರು 50 ಮೃತರ ಸಂಸ್ಕಾರ ನೆರವೇರಿಸಿದ್ದು, 1,100ಕ್ಕೂ ಅಧಿಕ ಮಂದಿಯ ಶವಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ" ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಕೇಶ್ ಕುಮಾರ್, "ಜನಸೇವೆಯೇ ಜನಾರ್ಧನ ಸೇವೆ ಎನ್ನುವುದು ನನ್ನ ವಾದ. ಈ ನಿಟ್ಟಿನಲ್ಲಿ ಪುತ್ರಿಯ ವಿವಾಹ ಮುಂದೂಡಿದ್ದೇನೆ. ನಾನು ಎರಡು ಡೋಸ್ ಕೊರೊನಾ ಲಸಿಕೆ ಪಡೆದು ಈ ಕಾರ್ಯ ಮಾಡುತ್ತಿದ್ದೇನೆ" ಎಂದಿದ್ದಾರೆ.