ಬೆಂಗಳೂರು, ಮೇ.07 (DaijiworldNews/PY): "ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಮಂದಿ ಸಂಸದರು ಬೆನ್ನುಮೂಳೆ ಕಳೆದುಕೊಂಡಿದ್ದಾರಾ?. ಇವರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು" ಎಂದು ವಿಪಕ್ಷ ನಾಯಕ ಬಿಜೆಪಿಯನ್ನು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದ ವಿರುದ್ದ ಕರ್ನಾಟಕ ಸರ್ಕಾರ ಅಥವಾ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೋರಾಟ ನಡೆಸಿದ್ದಾರೆಯೇ?" ಎಂದು ಕೇಳಿದ್ದಾರೆ.
"ಕರ್ನಾಟಕಕ್ಕೆ 1600-1700 ಮೆ.ಟನ್ ಗಿಂತ ಅಧಿಕ ಆಮ್ಲಜನಕದ ಅವಶ್ಯಕತೆ ಇದೆ. ಆದರೆ, ಕೇಂದ್ರ ಸರ್ಕಾರ ಕೇವಲ 675 ಮೆ.ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ, ಇದು ಬೇಡಿಕೆಯ ಶೇ.60%ಕ್ಕಿಂತ ಕಡಿಮೆ. ಕರ್ನಾಟಕದ ಅಗತ್ಯತೆಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ಕರ್ನಾಟಕದಿಂದ ಬಿಜೆಪಿಯ 25 ಮಂದಿ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ 25 ಮಂದಿ ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಮಾತನಾಡುವ ಧೈರ್ಯ ಇಲ್ಲವೇ?. ಅವರು ತಮ್ಮ ಬೆನ್ನುಮೂಳೆಯನ್ನು ಕಳೆದುಕೊಂಡಿದ್ದಾರಾ?. ಅವರಿಗೆ ನಾಚಿಕೆಯಾಗಬೇಕು. ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು. ಮಾನವಕುಲಕ್ಕೆ ಕಳಂಕ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.