ಬೆಂಗಳೂರು,ಮೇ.07 (DaijiworldNews/HR): ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ಮತ್ತು ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಾರ್ ರೂಮ್ನಲ್ಲಿ ಕ್ಷಮೆಯಾಚಿಸಿದ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ನಕಲಿ ಎಂದು ತೇಜಸ್ವಿ ಸೂರ್ಯ ಅವರ ಕಚೇರಿಯು ಟ್ವೀಟ್ ಮಾಡಿದೆ.
ಹಾಸಿಗೆ ಹಂಚಿಕೆ ಕಾರ್ಯಾಚರಣೆಯನ್ನು ಕೋಮುವಾದಗೊಳಿಸಿದ ಬಳಿಕ, ಕೆಂಗಣ್ಣಿಗೆ ಗುರಿಯಾಗಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಮತ್ತೆ ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್ಗೆ ಹಿಂತಿರುಗಿ ಕ್ಷಮೆಯಾಚಿಸಿದ್ದಾರೆ ಎಂದು ಶುಕ್ರವಾರ ಮಾಧ್ಯಮಗಳಲ್ಲಿ ವರದಿ ಬಂದಿತ್ತು.
ಶುಕ್ರವಾರ ಮಧ್ಯಾಹ್ನ, ತೇಜಸ್ವಿ ಸೂರ್ಯ ಅವರ ಕಚೇರಿಯು, "ಯಾವುದೇ ಸುದ್ದಿಯಿಲ್ಲದಿದ್ದಾಗ, ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಾರೆ" ಎಂದು ಹೇಳಿ ಟ್ವೀಟ್ ಮಾಡಿದೆ.
ತೇಜಸ್ವಿ ಮತ್ತು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಎಂ.ಸತೀಶ್ ರೆಡ್ಡಿ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಮಂಗಳವಾರ ಕೊರೊನಾ ವಾರ್ ರೂಮ್ಗೆ ತೆರಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಸಿಗೆ ಹಂಚಿಕೆ ಕಾರ್ಯಾಚರಣೆಯನ್ನು ಕೋಮುವಾದಗೊಳಿಸಿದ ಬಳಿಕ, ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.
ಹಿಂದಿನ ವರದಿ:
ಬೆಂಗಳೂರು, ಮೇ.07 (DaijiworldNews/HR): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಸಿಗೆ ಹಂಚಿಕೆ ಕಾರ್ಯಾಚರಣೆಯನ್ನು ಕೋಮುವಾದಗೊಳಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಮತ್ತೆ ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್ಗೆ ಹಿಂತಿರುಗಿ ಬಾರಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಾರ್ ರೂಮ್ಗೆ ತೆರಳಿ ಸೂರ್ಯ, "ನನ್ನ ಉದ್ಯೋಗಿಗಳು ನನಗೆ ಕರೆ ಮಾಡಿ ಸ್ಪಷ್ಟವಾಗಿ ನನಗೆ ಮಾಹಿತಿ ನೀಡಿದರು, ನಿಮ್ಮಲ್ಲಿ ಯಾರ ವಿರುದ್ಧವೂ ನನಗೆ ವೈಯಕ್ತಿಕವಾಗಿ ಏನೂ ದ್ವೇಷ ಇಲ್ಲ. ನನ್ನ ಭೇಟಿಯಿಂದ ಯಾರಿಗಾದರೂ ಅಥವಾ ಯಾವುದೇ ಸಮುದಾಯ ಭಾವನಾತ್ಮಕವಾಗಿ ನೊಂದಿದ್ದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಗಮನಕ್ಕೆ ಬಂದ ಹಾಸಿಗೆ ಹಂಚಿಕೆ ಹಗರಣದ ಬಗ್ಗೆ ತನಿಖೆ ನಡೆಸಲು ನಾನು ಬಯಸಿದ್ದೆ, ಆದರೆ ನನ್ನಿಂದ ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನನ್ನ ಕ್ಷಮೆಯಾಚಿಸಿ" ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಂಸದ ಸೂರ್ಯ ಎರಡು ದಿನಗಳ ಹಿಂದೆ ತನ್ನ ಸಂಸದೀಯ ಕ್ಷೇತ್ರದ ನಾಲ್ವರು ಶಾಸಕರೊಂದಿಗೆ ವಾರ್ ರೂಮ್ಗೆ ತೆರಳಿ, ಮುಸ್ಲಿಂ ಉದ್ಯೋಗಿಗಳ 16 ಹೆಸರುಗಳನ್ನು ಓದಿದ್ದರು, ಇನ್ನೊಬ್ಬ ಶಾಸಕರು ಅವರು ಸಹಾಯವಾಣಿ ಅಥವಾ ಮದರಸಾವನ್ನು ನಡೆಸುತ್ತಿದ್ದಾರೆಯೇ ಎಂದು ಕೇಳಿದ್ದರು.
ವಾರ್ ರೂಮ್ನ ಈ 16 ಸದಸ್ಯರು ಹಾಸಿಗೆ ಹಂಚಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆಗಳ ಬಗ್ಗೆ ವಾಸ್ತವಾಂಶ ಪರಿಶೀಲನೆ ನಡೆಸಿದ ಬಳಿಕ, ಈ 16 ಜನರಲ್ಲಿ ಒಬ್ಬರು ಮಾತ್ರ ಹಾಸಿಗೆ ಹಂಚಿಕೆಯ ತಂಡದ ಭಾಗವಾಗಿದ್ದರು ಮತ್ತು ಅವರು ಕಳೆದ ವಾರವಷ್ಟೇ ಮನೆಯಲ್ಲಿ ವೈಯಕ್ತಿಕ ತುರ್ತು ಪರಿಸ್ಥಿತಿ ಹೊಂದಿದ್ದ ಇನ್ನೊಬ್ಬ ಉದ್ಯೋಗಿಯನ್ನು ಬದಲಾಯಿಸಲು ತಾತ್ಕಾಲಿಕವಾಗಿ ಸೇರಿಕೊಂಡಿದ್ದರು.
ಇನ್ನು ಉಳಿದ 15 ಮಂದಿ ಅವರಲ್ಲಿ ಹೆಚ್ಚಿನವರು ಐಸಲೋಷನ್ ಮೇಲ್ವಿಚಾರಣೆ ಮತ್ತು ಕ್ವಾರಂಟೈನ್ ಅವಧಿಯನ್ನು ಮುಗಿಸಿದ ರೋಗಿಗಳ ಬಿಡುಗಡೆಯಲ್ಲಿ ತೊಡಗಿರುವ ಇತರ ತಂಡಗಳ ಸದಸ್ಯರಾಗಿದ್ದರು.