ಜೋಧಪುರ, ಮೇ.07 (DaijiworldNews/PY): ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಸುಮಾರು 95 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಬಾಲಕನನ್ನು 16 ಗಂಟೆಯ ಸುದೀರ್ಘ ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ.
ಬಾಲಕನನ್ನು ಅನಿಲ್ ದೇವಾಸಿ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಲಾಂಚ್ರಿ ಗ್ರಾಮದ ಹೊಲವೊಂದರಲ್ಲಿ ಆಟವಾಡುತ್ತಿದ್ದ ಸಂದರ್ಭ ಬಾಲಕ ಎರಡು ದಿನಗಳ ಹಿಂದೆಯಷ್ಟೇ ಕೊರೆಯಲಾಗಿದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಶುಕ್ರವಾರ ಮುಂಜಾನೆ 2 ಗಂಟೆಯ ಸುಮಾರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಬಾಲಕನನ್ನು ರಕ್ಷಿಸಿದ್ದಾರೆ.
"ಬಾಲಕ ಅನಿಲ್ನನ್ನು ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ. ಆತ ಸುರಕ್ಷಿತವಾಗಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಎಸ್ಡಿಎಂ ಭೂಪೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
"ಬಾಲಕನ ರಕ್ಷಣೆಗಾಗಿ ಆಕ್ಸಿಜನ್ ವ್ಯವಸ್ಥೆ, ಆಹಾರ ಒದಗಿಸಲಾಗುತ್ತಿತ್ತು" ಎಂದು ಅಧಿಕಾರಿಗಳು ಹೇಳಿದ್ದಾರೆ.