ಬೆಂಗಳೂರು, ಮೇ.07 (DaijiworldNews/PY): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಏತನ್ಮಧ್ಯೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಗಾಂಧಿನಗರದ ಸಮೀಪದ ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸಿಎಂ, "ಕೊರೊನಾ ದೂರವಾಗಲಿ ಎನ್ನುವ ನಿಟ್ಟಿನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಾಳೆ ಮಹತ್ವದ ಸಭೆ ಕರೆಯಲಾಗಿದೆ. ಜನತೆ ಜನತಾ ಕರ್ಫ್ಯೂ ಅನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ. ಲಾಕ್ಡೌನ್ ಅನಿವಾರ್ಯವಾಗಬಹುದು. ಕಠಿಣ ಕ್ರಮ ಕೈಗೊಳ್ಳಬಾರದು ಎಂದರೆ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ" ಎಂದು ತಿಳಿಸಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ಕುರಿತು ತೇಜಸ್ವಿ ಸೂರ್ಯ ಅವರ ಕಾರ್ಯವನ್ನು ಶ್ಲಾಘಿಸಿದ ಸಿಎಂ, "ಜಮೀರ್ ಅಹ್ಮದ್ ಅವರು ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ. ತೇಜಸ್ವಿ ಸೂರ್ಯ ಅವರು ರಿಸ್ಕ್ ತೆಗೆದುಕೊಂಡು ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ವಿಚಾರದ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡು ಬಿಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ" ಎಂದಿದ್ದಾರೆ.