ಬೆಂಗಳೂರು, ಮೇ.07 (DaijiworldNews/HR): ಮೇ.15 ರಿಂದ ನಂತರ 18ರಿಂದ 45 ವರ್ಷದವರಿಗೆ ಲಸಿಕೆ ಕೊಡುವ ಅಭಿಯಾನ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಎರಡು ಲಸಿಕಾ ಕಂಪನಿಗಳಿದ್ದು ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಲಸಿಕೆ ನಮಗೆ ಲಭ್ಯವಾಗುತ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದು, ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡುವಂತೆ ಕೇಳಿದ್ದು, ಮೇ 15 ನಂತರ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ" ಎಂದು ಭರವಸೆ ನೀಡಿದರು.
"ಬೇರೆಯವರಿಂದ ಆಮ್ಲಜನಕ ಪಡೆಯುವ ಬದಲು ನಾವೇ ಹವಾಮಾನದಿಂದ ಆಮ್ಲಜನಕ ಪಡೆಯುವ ಯೋಜನೆಗೆ ಸಿದ್ಧತೆ ಮಾಡುತ್ತಿದ್ದು, ಹವಾಮಾನದಿಂದ ಆಮ್ಲಜನಕ ಉತ್ಪತ್ತಿ ಮಾಡುವ ಜನರೇಟರ್ ಪ್ರಾರಂಭ ಮಾಡುತ್ತೇವೆ" ಎಂದಿದ್ದಾರೆ.
ಇನ್ನು ಕೊರೊನಾ ಆರೈಕೆ ಕೇಂದ್ರದಲ್ಲಿ ಆಮ್ಲಜನಕ ಸಾಂದ್ರೀಕರಣಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತಿದ್ದು, 50ರಿಂದ 1 ಲಕ್ಷ ರೂ.ಗಳಿಗೆ ಯಂತ್ರ ಖರೀದಿ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಗೆ ಒಂದು ಸಾವಿರ ಯಂತ್ರ ಕೊಡುವ ತೀರ್ಮಾನ ಮಾಡಲಾಗಿದ್ದು, ಆದಷ್ಟು ಬೇಗ ಈ ಯಂತ್ರ ತರಿಸುವ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.