ಚೆನ್ನೈ, ಮೇ 07 (DaijiworldNews/MS): ತಮಿಳುನಾಡಿನಲ್ಲಿ ದಿನವೊಂದಕ್ಕೆ 21,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ಪತ್ತೆಯಾಗುತ್ತಿರುವುದರಿಂದ ಹಾಸಿಗೆಗಳು ಮತ್ತು ಆಮ್ಲಜನಕದ ಅಗತ್ಯತೆಯೂ ತೀವ್ರವಾಗಿ ಹೆಚ್ಚಾಗಿದೆ. ರಾಜ್ಯದಲ್ಲಿ 85,000 ಹಾಸಿಗೆಗಳನ್ನು ಹೊಂದಿದ್ದು, ಅದರಲ್ಲಿ 35,000 ಆಮ್ಲಜನಕ ಪಾಯಿಂಟ್ ಗಳಿವೆ. ಚೆನ್ನೈನಲ್ಲಿ ಮಾತ್ರ 6,000 ಆಮ್ಲಜನಕ ಹಾಸಿಗೆಗಳಿವೆ.
ಇಂತಹ ಸಾಂಕ್ರಮಿಕ ಕಾಲಘಟ್ಟದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಎದುರಿಸುತ್ತಿರುವ ದೊಡ್ಡ ಹೋರಾಟವೆಂದರೆ ಚಿಕಿತ್ಸೆಗಾಗಿ ಹಾಸಿಗೆಗಳು ಸಿಗದೆ ಒದ್ದಾಡುವುದು. ಹಲವಾರು ರೋಗಿಗಳಿಗೆ ಆಸ್ಪತ್ರೆ ತಲುಪಿದರು ಬೆಡ್ ಗಳಿಲ್ಲದೆ ಒದ್ದಾಡುತ್ತಾರೆ. ಇನ್ನು ಕೆಲವರು ಆಸ್ಪತ್ರೆಗಳ ಹೊರಗೆ ಆಂಬುಲೆನ್ಸ್ಗಳಲ್ಲಿ ರೋಗಿಗಳಿಗೆ ಗಾಳಿ ಬೀಸುತ್ತಾ ನಿಲ್ಲುತ್ತಾರೆ. ಇಂತಹ ಬಿಕ್ಕಟ್ಟಿನ ಸಂದರ್ಭ ಜೈನ್ ಇಂಟರ್ನ್ಯಾಷನಲ್ ಸಂಘಟನೆ 'ಆಕ್ಸಿಜನ್ ಆನ್ ವೀಲ್ಸ್' ಎಂಬ ಆಶಾಕಿರಣದೊಂದಿಗೆ ಬಂದಿದೆ.
ಜೈನ್ ಇಂಟರ್ನ್ಯಾಷನಲ್ ಸಂಘಟನೆ 4 ಆಕ್ಸಿಜನ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಪ್ರಸ್ತುತ ಬಳಸದ ಹಲವಾರು ಶಾಲಾ ಬಸ್ಗಳನ್ನು ತಲಾ ಆರು ರೋಗಿಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಲಾಗಿದೆ. ಇವು ಆಸ್ಪತ್ರೆಗಳ ಹೊರಗೆ ಕಾಯುವ ರೋಗಿಗಳಿಗೆ ಅನುಕೂಲವಾಗುವಂತೆ 6 ಆಮ್ಲಜನಕ ಸಾಂದ್ರಕಗಳು ಮತ್ತು ಸಿಲಿಂಡರ್ಗಳನ್ನು ಅಳವಡಿಸಲಾಗಿದೆ.
ಆಸ್ಪತ್ರೆಯ ಹೊರಗೆ ಹಲವಾರು ರೋಗಿಗಳು ಆಮ್ಲಜನಕಕ್ಕಾಗಿ ಕಾಯುತ್ತಿದ್ದಾರೆ ಎಂಬ ವರದಿಗಳ ನಂತರ 'ಆಕ್ಸಿಜನ್ ಆನ್ ವೀಲ್ಸ್' ಪರಿಚಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಅಧ್ಯಕ್ಷ ಸುರೇಶ್ ಮುತಾ ಹೇಳಿದ್ದಾರೆ. "ಹಾಸಿಗೆಗಳಿಲ್ಲದ ಕಾರಣ ಹೊರಗೆ ಸಾಕಷ್ಟು ಆಂಬುಲೆನ್ಸ್ಗಳು ಕಾಯುತ್ತಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ದೊರಕುವಷ್ಟು ಸಮಯದವರೆಗೆ ಬಸ್ ನಲ್ಲಿ ಆಕ್ಸಿಜನ್ ಪಡೆಯಬಹುದಾಗಿದೆ" ಎಂದು ಸುರೇಶ್ ಮುತಾ ಹೇಳಿದರು.
ಆರಂಭದಲ್ಲಿ ಚೆನ್ನೈನ ಪ್ರಮುಖ ಆಸ್ಪತ್ರೆಗಳ ಹೊರಗೆ ನಾಲ್ಕು ಬಸ್ಗಳನ್ನು ಬಳಸಲಾಗಿತ್ತು. ಶೀಘ್ರದಲ್ಲೇ ಬಸ್ಗಳ ಸಂಖ್ಯೆಯನ್ನು ಇಪ್ಪತ್ತಕ್ಕೆ ಹೆಚ್ಚಿಸಲಾಗುವುದು.ಇದಲ್ಲದೆ, ಯಶಸ್ಸಿನ ಆಧಾರದ ಮೇಲೆ, ಈ ವಿಚಾರವನ್ನು ತಮಿಳುನಾಡಿನಾದ್ಯಂತ ವಿಸ್ತರಿಸಬಹುದು ಎಂದು ಸುರೇಶ್ ಮುತಾ ಹೇಳಿದರು.