ಚೆನ್ನೈ, ಮೇ 07 (DaijiworldNews/MB) : ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ (ಎಂ.ಕೆ.ಸ್ಟಾಲಿನ್) ಅವರು ತಮಿಳು ನಾಡು ರಾಜ್ಯದ 8ನೇ ಮುಖ್ಯಮಂತ್ರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ತಮಿಳು ನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸ್ಥಾಪಕ ಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಸ್ಟಾಲಿನ್, ಇಂದು ಬೆಳಗ್ಗೆ ಚೆನ್ನೈಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಿದರು.
2018ರಲ್ಲಿ ಎಂ ಕರುಣಾನಿಧಿಯವರ ನಿಧನ ಬಳಿಕ ಡಿಎಂಕೆ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. 2009ರಲ್ಲಿ ಅವರು ತಮಿಳು ನಾಡಿನ ಉಪ ಮುಖ್ಯಮಂತ್ರಿಯಾಗಿದ್ದು, 2006ರಲ್ಲಿ ಡಿಎಂಕೆ ಅಧಿಕಾರವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವರಾಗಿದ್ದರು.
ಹಾಗೆಯೇ ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಇವರನ್ನು ಅಭಿಮಾನಿಗಳು ಪ್ರೀತಿಯಿಂದ ತಲಪತಿ ಎಂದು ಕರೆಯುತ್ತಾರೆ.
ಇನ್ನು ಸ್ಟಾಲಿನ್ ಅವರು ತಮ್ಮ ಸಂಪುಟಕ್ಕೆ, ಅನುಭವಿಗಳು ಮತ್ತು ಹೊಸಬರನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಹವಾಮಾನ ವೈಪರೀತ್ಯ, ರೈತರ ಕಲ್ಯಾಣ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅನಿವಾಸಿ ತಮಿಳರ ಕಲ್ಯಾಣ ಖಾತೆಗಳನ್ನು ರಚಿಸಿ, ಹಂಚಿಕೆ ಮಾಡಲಾಗಿದೆ.