ಬೆಂಗಳೂರು, ಮೇ.07 (DaijiworldNews/PY): "ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು" ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಒತ್ತಾಯಿಸಿದ್ದಾರೆ.
"ಬೆಂಗಳೂರು ದಕ್ಷಿಣ ವಲಯ ಮಾತ್ರವಲ್ಲದೇ ಎಲ್ಲಾ ವಲಯಗಳ ವಾರ್ ರೂಂಗಳಲ್ಲೂ ಬೆಡ್ ಬುಕ್ಕಿಂಗ್ ಜಾಲ ಕಾರ್ಯ ನಿರ್ವಹಿಸುತ್ತಿದ್ದು, ತಕ್ಷಣವೇ ಎಲ್ಲಾ ವಾರ್ರೂಂಗಳನ್ನು ರದ್ದು ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ದಕ್ಷಿಣ ವಾರ್ರೂಂನಲ್ಲಿರುವ ಎಲ್ಲಾ ನೌಕರರನ್ನು ತಕ್ಷಣವೇ ವಜಾ ಮಾಡಬೇಕು. ನ್ಯಾಯಾಂಗ ತನಿಖೆಯ ನಂತರ ತಪ್ಪಿತಸ್ಥರಲ್ಲ ಎಂದು ತಿಳಿದ ಸಿಬ್ಬಂದಿಯನ್ನು ಮಹಾನಗರಪಾಲಿಕೆ ಮರುನೇಮಕ ಮಾಡಿಕೊಳ್ಳಲಿ" ಎಂದಿದ್ದಾರೆ.
"ಕೊರೊನಾ ಆಸ್ಪತ್ರೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಲ್ಲಿ 12ಕ್ಕಿಂತ ಅಧಿಕ ಆಸ್ಪತ್ರೆಗಳು ಶಾಮೀಲಾಗಿವೆ. ಈ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
"ಇನ್ನು ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ತಿಳಿಸಿದ ಅವರು, ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ. ನೈತಿಕ ಹೊಣೆ ಹೊತ್ತು ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು" ಎಂದು ಫಾರೂಕ್ ಆಗ್ರಹಿಸಿದ್ದಾರೆ.