ನವದೆಹಲಿ, ಮೇ.07 (DaijiworldNews/PY): "ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದು, ದೇಶ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ನತ್ತ ಸಾಗುವಂತಾಗಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಂಡಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಳೆದ ವರ್ಷ ದಿಢೀರನೇ ಲಾಕ್ಡೌನ್ ಹೇರಿದ್ದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಆದ್ದರಿಂದ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಹೇರುವುದನ್ನು ನಾನು ವಿರೋಧಿಸುತ್ತೇನೆ" ಎಂದು ಹೇಳಿದ್ದಾರೆ.
"ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಬಳಿ ಯಾವುದೇ ಕಾರ್ಯ ಯೋಜನೆ ಇಲ್ಲ. ಮೋದಿ ಸರ್ಕಾರದ ವೈಫಲ್ಯದ ಕಾರಣ ದೇಶದಲ್ಲಿ ಮತ್ತೊಂದು ಲಾಕ್ಡೌನ್. ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ" ಎಂದಿದ್ದಾರೆ.
"ಕಷ್ಟದ ಸಂದರ್ಭ ಬಡ ಜನರಿಗೆ ಆರ್ಥಿಕ ಪ್ಯಾಕೇಜ್ ಹಾಗೂ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದು ಅವಶ್ಯಕ" ಎಂದು ತಿಳಿಸಿದ್ದಾರೆ.