ಬೆಂಗಳೂರು, ಮೇ. 06 (DaijiworldNews/HR) : ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 6,034 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಇನ್ನೂ 1,135 ಹಾಸಿಗೆಗಳು ಶೀಘ್ರದಲ್ಲೇ ದೊರೆಯಲಿವೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಇಂದು ವಿಧಾನ ಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗೃಹ ಮತ್ತು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರು ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್ ಮತ್ತು ಬೊಮ್ಮಾಯಿ, "ತಾಯಿ ಮತ್ತು ಮಗುವಿನ ಆಸ್ಪತ್ರೆ, ನಾನ್ ಕೋವಿಡ್ ತುರ್ತು ಆಸ್ಪತ್ರೆ ಹೊರತುಪಡಿಸಿ ಉಳಿದೆಡೆ ಶೇ.75 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಪಡೆಯಲಾಗಿದೆ" ಎಂದರು.
ಇನ್ನು ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ನಾವು ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗ ನಮ್ಮಲ್ಲಿ ಸುಮಾರು 5 ಲಕ್ಷ ಡೋಸ್ಗಳ ಸಂಗ್ರಹವಿದ್ದು, ಇಲ್ಲಿಯವರೆಗೆ ನಾವು ರಾಜ್ಯದಲ್ಲಿ 1 ಕೋಟಿಗಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ನೀಡಿದ್ದು, ರಾಜ್ಯ ಸರ್ಕಾರವು 2 ಕೋಟಿ ಡೋಸ್ ಲಸಿಕೆ ನೀಡಲು ಆದೇಶಿಸಿದೆ ಮತ್ತು ಮೇ 15 ರ ವೇಳೆಗೆ ಕಂಪನಿಗಳಿಂದ ನೇರವಾಗಿ ಲಸಿಕೆ ರವಾನೆಯಾಗಲಿದೆ" ಎಂದಿದ್ದಾರೆ.
ಅಂತಿಮ ವರ್ಷದ ಎಂಬಿಬಿಎಸ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಭತ್ಯೆ ನೀಡುವುದು, ಇಂಟರ್ನಲ್ ನಲ್ಲಿ ಅಂಕ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಕೊರೊನಾ ಸೇನಾನಿಗಳೆಂದು ಪರಿಗಣಿಸಿ ಆದ್ಯತೆ ಮೇಲೆ ಲಸಿಕೆ ನೀಡಲು ನಿರ್ಧರಿಸಲಾಗಿದೆ" ಎಂದರು.
ಇನ್ನು "ಇಡೀ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ರಿಸ್ಕ್ ಭತ್ಯೆ ನೀಡಲು ನಿರ್ಧರಿಸಲಾಗಿದ್ದು, ಆಸ್ಪತ್ರೆಗಳಲ್ಲಿ ಮರಣ ಪ್ರಮಾಣ ಕಡಿಮೆ ಮಾಡಲು ಉತ್ತಮ ಚಿಕಿತ್ಸೆ ನೀಡಬೇಕು, ಟೆಲಿ ಐಸಿಯು ಸೇವೆಯೂ ನೀಡಬೇಕು ಎಂದು ಸೂಚಿಸಲಾಗಿದೆ.