ನವದೆಹಲಿ, ಮೇ.06 (DaijiworldNews/PY): ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ನಿರ್ಬಂಧಗಳನ್ನು ಜಾರಿ ಮಾಡಿದರೂ ಕೂಡಾ ನಿಯಂತ್ರಣಕ್ಕೆ ಬರುತ್ತಿಲ್ಲ. ಐಸಿಯು ಸೇರಿದಂತೆ ಆಕ್ಸಿಜನ್ ಹಾಗೂ ಲಸಿಕೆ ಕೊರತೆ ದೇಶವನ್ನು ಅಪಾಯಕ್ಕೆ ದೂಡುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ರಾಜ್ಯ ಹಾಗೂ ಜಿಲ್ಲಾವಾರು ಕೊರೊನಾ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.
ಸಭೆಯಲ್ಲಿ, ಪ್ರಧಾನಿ ಮೋದಿ ಅವರು ರಾಜ್ಯ ಹಾಗೂ ಜಿಲ್ಲೆಯ ಕೊರೊನಾ ಪ್ರಕರಣ ಹೆಚ್ಚಳ, ಸಕ್ರಿಯ ಪ್ರಕರಣಗಳ ಬಗ್ಗೆ ವಿವರ ಪಡೆದುಕೊಂಡಿದ್ದಾರೆ.
"ರಾಜ್ಯಗಳು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದಾರೆ. ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಲು ಪ್ರಮುಖ ಸೂಚಕಗಳ ಬಗ್ಗೆ ರಾಜ್ಯಗಳಿಗೆ ನೆರವಾಗಲು ಮಾರ್ಗದರ್ಶನ ನೀಡಬೇಕು" ಎಂದು ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದಾರೆ.
"ಶೇ.10ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಜಿಲ್ಲೆಗಳನ್ನು ಗುರುತಿಸಿ ಶೀಘ್ರವೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ. ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಶೇ.10ಕ್ಕಿಂತ ಹೆಚ್ಚಾಗಿದ್ದು, ಶೇ.60ಕ್ಕಿಂತ ಹೆಚ್ಚಿನ ಬೆಡ್ ಹಾಗೂ ಐಸಿಯು ಬೇಡಿಕೆ ಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು" ಎಂದು ಸೂಚಿಸಿದ್ದಾರೆ.
ಈ ವೇಳೆ ರೆಮ್ಡಿಸಿವರ್ ಔಷಧಗಳ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ, ಲಸಿಕೆಯ ಉತ್ಪಾದನೆಯ ವೇಗ ಹೆಚ್ಚಿಸಿ ಅವಶ್ಯಕತೆಗೆ ತಕ್ಕಂತೆ ಪೂರೈಸುವುದಾಗಿ ಭರವಸೆ ನೀಡಿದ್ದಾರೆ.
ಲಸಿಕೆ ವ್ಯರ್ಥ ಬಗ್ಗೆ ರಾಜ್ಯವಾರು ವರದಿಯನ್ನು ಪರಿಶೀಲಿಸಿದರು. "ಲಸಿಕೆ ಪಡೆಯಲು ಲಾಕ್ಡೌನ್ ಅಥವಾ ಕರ್ಫ್ಯೂ ತೊಡಕಾಗಬಾರದು. ಲಸಿಕೆ ನೀಡುವಿಕೆಯ ವೇಗವನ್ನು ಹೆಚ್ಚಿಸಬೇಕು" ಎಂದು ತಿಳಿಸಿದ್ದಾರೆ.