ಬೆಂಗಳೂರು, ಮೇ.06 (DaijiworldNews/PY): ಕೊರೊನಾ ಸೋಂಕಿತೆಯೋರ್ವರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ನೇರವಾಗಿ ವಿಧಾನಸೌಧಕ್ಕೆ ಆಂಬುಲೆನ್ಸ್ನಲ್ಲಿ ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸಂಪರ್ಕಿಸಿ ಬೆಡ್ ವ್ಯವಸ್ಥೆ ಆಗದೇ ಇದ್ದ ಕಾರಣ ಸೋಂಕಿತೆಯ ಕುಟುಂಬಸ್ಥರು ವಿಧಾನಸೌಧದ ಮುಂದೆ ಬಂದು ಬೆಡ್ ನೀಡಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಅಫ್ಜಲ್ ಪ್ರತಿಕ್ರಿಯೆ ನೀಡಿದ್ದು, "ನಾನು ನಿನ್ನೆಯಿಂದ ಬೆಡ್ ಹುಡುಕುತ್ತಿದ್ದೇನೆ. ಬೆಳಗ್ಗೆ ಆಸ್ಪತ್ರೆಯಿಂದ ನಮ್ಮನ್ನು ಹೊರಕ್ಕೆ ಕಳುಹಿಸಿದ್ದಾರೆ. ಬಿಬಿಎಂಪಿಯಿಂದ ದಾಖಲಾತಿ ಸಂಖ್ಯೆಯನ್ನು ನೀಡಿದ್ದಾರೆ. ಆದರೆ, ಬಿಯು ಸಂಖ್ಯೆ ಇನ್ನೂ ಬಂದಿಲ್ಲ. ಈ ರೀತಿ ಮಾಡಿದರೆ ನಾನು ಎಲ್ಲಿಗೆ ಹೋಗಬೇಕು. ನಾನು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತಿದ್ದೇನೆ ದಯವಿಟ್ಟು ನಮಗೆ ಬೆಡ್ ವ್ಯವಸ್ಥೆ ಮಾಡಿಕೊಡಿ. ನಾನು ನನ್ನ ಕೈ ಮೀರಿ ಪ್ರಯತ್ನ ಮಾಡುತ್ತಿದ್ದೇನೆ. ಒಂದು ಬೆಡ್ ವ್ಯವಸ್ಥೆ ಮಾಡಿಕೊಡಿ. ನಿನ್ನೆಯಿಂದ ಬೆಡ್ಗಾಗಿ ಆರು ಗಂಟೆ ಕಾಯಿಸಿದ್ದು, ಕೊನೆಗೆ ಬೆಡ್ ಇಲ್ಲ" ಎಂದಿದ್ದಾರೆ.
"ಸಿಎಂ ಅವರು ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆಯ ಮೇರೆಗೆ ನಾವು ವಿಧಾನಸೌಧದ ಬಳಿ ಬಂದಿದ್ದೇವೆ. ದಯವಿಟ್ಟು ಬೆಡ್ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚಿದ್ದಾರೆ. ಕೇವಲ ಒಂದು ಮೆಡಿಸಿನ್ಗೆ ಲ್ಯಾಬ್ನಲ್ಲಿ 30 ಸಾವಿರ ರೂ. ಕೊಟ್ಟಿದ್ದೇನೆ. ಇದರ ಬೆಲೆ 3-4 ಸಾವಿರ ಅಷ್ಟೆ. ಆದರೆ, ಲ್ಯಾಬ್ನಲ್ಲಿ 30 ಸಾವಿರ ತೆಗೆದುಕೊಂಡಿದ್ದಾರೆ. ನಾವು ಬಡವರು, ಅಷ್ಟು ಹಣ ಎಲ್ಲಿಂದ ಬರಬೇಕು" ಎಂದು ಕಣ್ಣೀರು ಹಾಕಿದ್ದಾರೆ.
"ಕೊರೊನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಕೇಳಿದರೆ ಬೆಡ್ ಇಲ್ಲ ಎಂದು ಹೇಳುತ್ತಾರೆ. ಹೀಗೆ ಹೇಳಿದರೆ ನಾವು ಎಲ್ಲಿಗೆ ಹೋಗಬೇಕು. ಬೆಡ್ ವ್ಯವಸ್ಥೆ ಆಗಿದ್ದರೆ ಇಲ್ಲಿಯವರೆಗೆ ಬರುತ್ತಿರಲಿಲ್ಲ. ಸಿಎಂ ಅವರೇ ಬೆಡ್ ವ್ಯವಸ್ಥೆ ಮಾಡಿಕೊಡಬೇಕು. ನಾನೋರ್ವ ಸಾಮಾಜಿಕ ಕಾರ್ಯಕರ್ತ. ಸುಮಾರು15 ದಿನಗಳಿಂದ ಕೊರೊನಾ ಸೋಂಕಿತರಿಗೆ ಬೆಡ್ ವ್ಯವ್ಯಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಯಾರೂ ಸಹಾಯ ಮಾಡುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ."
"ಒಂದು ವಾರದಿಂದ ಬೆಡ್ಗೋಸ್ಕರ ನಾವು ಅಲೆದಾಡುತ್ತಿದ್ದೇವೆ. ಎಲ್ಲೂ ಕೂಡಾ ವ್ಯವಸ್ಥೆ ಆಗಿಲ್ಲ. ಯಾರೂ ಮುಂದೆಬಂದು ಸಹಾಯ ಮಾಡುತ್ತಿಲ್ಲ. ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಅಂಗಲಾಚುತ್ತಿದ್ದೇನೆ. ಯಾರದರೂ ಸಹಾಯ ಮಾಡುತ್ತಾರೆ ಎನ್ನುವ ಉದ್ದೇಶದಿಂದ ವಿಧಾನಸೌಧದ ಎದುರು ಬಂದಿದ್ದೇವೆ" ಎಂದು ಸೋಂಕಿತೆಯ ಪುತ್ರ ತಿಳಿಸಿದ್ದಾರೆ.