ನವದೆಹಲಿ, ಮೇ.06 (DaijiworldNews/PY): "ದೇಶ ಕೊರೊನಾದ ಮೂರನೇ ಅಲೆಗೆ ಸಾಕ್ಷಿಯಾಗಲಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ತಪ್ಪಿಸಲು ನಾವು ಸಿದ್ದರಾಗಬೇಕು" ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
"ದೇಶದಾದ್ಯಂತ ಆಕ್ಸಿಜನ್ ವಿತರಣೆಯ ಸೂತ್ರವನ್ನು ಪುನರುಜ್ಜೀವನಗೊಳಿಸಬೇಕು. ಕೊರೊನಾದ ಮೂರನೇ ಅಲೆಗೆ ಸಿದ್ದವಾಗಲು ಪ್ಯಾನ್-ಇಂಡಿಯಾ ವಿಧಾನದೊಂದಿಗೆ ಸರ್ಕಾರ ಕೆಲಸ ಮಾಡಬೇಕು" ಎಂದು ಸೂಚಿಸಿದೆ.
"ಮೂರನೇ ಅಲೆಯ ಸಿದ್ದತೆಗಳು ಮುಖ್ಯವಾಗಿ ಮಕ್ಕಳೊಂದಿಗೆ ಹಾಗೂ ವಯೋಮಾನದ ಜನರಿಗೆ ಲಸಿಕೆ ಹಾಕುವತ್ತ ಗಮನಹರಿಸಬೇಕು" ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.
"ತಜ್ಞರ ಪ್ರಕಾರ, ಭಾರತದಲ್ಲಿ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಗು ಆಸ್ಪತ್ರೆಗೆ ಹೋದಾಗ ಪೋಷಕರೂ ಕೂಡಾ ಹೋಗಲೇ ಬೇಕಾಗುತ್ತದೆ. ಈ ಹಿನ್ನೆಲೆ ಈ ಗುಂಪಿನ ಜನರಿಗೆ ಲಸಿಕೆ ನೀಡುವುದು ಮುಖ್ಯ. ವೈಜ್ಞಾನಿಕ ರೂಪದಲ್ಲಿ ಇದಕ್ಕೆ ಯೋಜನೆಯನ್ನು ರೂಪಿಸುವ ಅವಶ್ಯಕತೆ ಇದೆ. ಹಾಗಾಗಿ ಒಂದು ವ್ಯವಸ್ಥೆ ಮಾಡಬೇಕಾಗಿದೆ" ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
"ಕೊರೊನಾ ನಿಯಂತ್ರಣಕ್ಕೆ ಇಂದು ನಾವು ತಯಾರಿ ಮಾಡಿದ್ದಲ್ಲಿ, ಮೂರನೇ ಅಲೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.