ಬೆಂಗಳೂರು, ಮೇ.06 (DaijiworldNews/PY): ಈಗಾಗಲೇ ನಾನು ರಾಜೀನಾಮೆ ನೀಡಿಯೇ ಇಲ್ಲಿಗೆ ಬಂದಿದ್ದೇನೆ. ಇದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತದ ಹಿನ್ನೆಲೆ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕೊರೊನಾ ಯೋಧನ ರೀತಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ನನ್ನ ಕೆಲಸದ ಕಡೆಗೆ ಗಮನ ನೀಡುತ್ತೇನೆ. ಸರ್ಕಾರ ಹಾಗೂ ಪಕ್ಷ ನೀಡುವ ಆದೇಶದಂತೆ ನಾನು ನನ್ನ ಕರ್ತವ್ಯವನ್ನು ಮಾಡುತ್ತೇನೆ" ಎಂದಿದ್ದಾರೆ.
"ನಾನು ಯಾರ ವೈಯುಕ್ತಿಕ ವಿಚಾರದ ಬಗ್ಗೆಯೂ ಮಾತನಾಡುವುದಿಲ್ಲ. ನಾನು ರಾಜೀನಾಮೆ ನೀಡಬೇಕು ಎಂದು ರೇಣುಕಾಚಾರ್ಯ ಹೇಳಿದ್ದರು. ಆದರೆ, ಈಗಲೂ ನನಗೆ ಅವರ ಮೇಲೆ ಗೌರವವಿದೆ" ಎಂದು ಹೇಳಿದ್ದಾರೆ.
"ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರುವ ವಿಚಾರ ಕುರಿತು ನನಗೆ ಬೇಸರವಿಲ್ಲ. ಬದಲಾಗಿ ಇದರಿಂದ ನನಗೆ ಒಳ್ಳೆಯದೇ ಆಗಿದೆ. ನನಗೆ ಹಿರಿಯ ಸಚಿವರು ಸಹಕಾರ ನೀಡುತ್ತಾರೆ. ಎಲ್ಲಾ ಸಮಸ್ಯೆಗಳನ್ನು ಎರಡು-ಮೂರು ದಿನಗಳಲ್ಲಿ ಬಗೆಹರಿಸುತ್ತಾರೆ" ಎಂದಿದ್ದಾರೆ.