ಬೆಂಗಳೂರು, ಮೇ. 06 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕರ್ಫ್ಯೂ ವಿಸ್ತರಣೆಯ ಕುರಿತು ಮೇ 10ಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಸ್ತುತ ಇರುವ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆಗಳು ಅಥವಾ ಲಾಕ್ಡೌನ್ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಬಂದ ಬಳಿಕವಷ್ಟೇ ತೆಗೆದುಕೊಳ್ಳಲಾಗುತ್ತದೆ" ಎಂದರು.
ಇನ್ನು "ಸಂಪೂರ್ಣ ಲಾಕ್ಡೌನ್ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಡೆಸಿದ ಅವಲೋಕನದ ಆಧಾರದ ಮೇಲೆ ಪ್ರಧಾನಿ ಮೋದಿಯವರ ನಿರ್ಧಾರವು ಕರ್ನಾಟಕದ ಮೇಲೆಯೂ ಪ್ರಭಾವ ಬೀರುತ್ತದೆ" ಎಂದಿದ್ದಾರೆ.
"ಕರ್ನಾಟಕವು ಮೇ 10 ರ ಬಳಿಕ ಅಸ್ತಿತ್ವದಲ್ಲಿರುವ ಕರ್ಫ್ಯೂ ವಿಸ್ತರಣೆಗೆ ಅಥವಾ ಹೆಚ್ಚಿನ ನಿರ್ಬಂಧಗಳ ಹೇರಿಕೆ ಬಗ್ಗೆ ತೀರ್ಮಾನಿಸಲಿದ್ದು, ಪ್ರಸ್ತುತ ರಾಜ್ಯದಲ್ಲಿ ಮೇ 12 ರವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ನೆಲೆಸಿ ಸಿಎಂಗೆ ದೈನಂದಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ.