ಬೆಂಗಳೂರು, ಮೇ. 06 (DaijiworldNews/HR): ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸಂಭವೀಯ ಬಹುದೊಡ್ಡ ಆಕ್ಸಿಜನ್ ದುರಂತವೊಂದನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆಯ ಸಿಬ್ಬಂದಿ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಸ್ವಲ್ಪದರಲ್ಲೇ ತಪ್ಪಿದ ಘಟನೆ ನಡೆದಿದೆ.
ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಕೋವಿಡ್ ಚಿಕಿತ್ಸೆಯಲ್ಲಿ ಸುಮಾರು 200 ರೋಗಿಗಳು ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ 6 ಟನ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಟ್ಯಾಂಕ್ ಇದೆ ಮತ್ತು ಬುಧವಾರ ತಡರಾತ್ರಿಯ ವೇಳೆಗೆ ಕೇವಲ 0.5 ಟನ್ ಉಳಿದಿದೆ. ಸುಮಾರು 200 ರೋಗಿಗಳು ಆಕ್ಸಿಜನ್ ಬೆಡ್ʼಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಒದಗಿಸಲಾಗುತ್ತಿದ್ದ ಆಮ್ಲಜನಕವು ರಾತ್ರಿಯ ವೇಳೆಗೆ ಖಾಲಿಯಾಗುತ್ತಾ ಬಂದಿತ್ತು. ಪ್ರಾಕ್ಸಿ ಏರ್ ಎನ್ನುವ ಕಂಪನಿ ಬುಧವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಬೇಕಾಗಿತ್ತು. ಆದರೆ, ಬಳ್ಳಾರಿಯಿಂದ ಬರಬೇಕಾಗಿದ್ದ ಆ ಕಂಪನಿಯ ಟ್ಯಾಂಕರ್ ರಾತ್ರಿ 11.30 ಆದರೂ ಬರಲೇ ಇಲ್ಲ. ಬದಲಿಗೆ ಆ ಟ್ಯಾಂಕರ್ ಕೆ.ಸಿ.ಜನರಲ್ಗೆ ಬರುವ ಬದಲು ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬ ವಿಷಯ ತಿಳಿದುಬಂದಿದ್ದು, ಡಾ.ರೇಣುಕಾ ಪ್ರಸಾದ್ ಅವರು ತಕ್ಷಣವೇ ಡಾ.ಅಶ್ವಥಾ ನಾರಾಯಣ ಅವರೊಂದಿಗೆ ಸಂಪರ್ಕಿಸಿ ಪರಿಸ್ಥಿತಿಯ ತೀವ್ರತೆಯ ಬಗ್ಗೆ ತಿಳಿಸಿದರು.
ಬಳಿಕ 20 ಮುಖ್ಯ ಜಂಬೊ ಸಿಲಿಂಡರ್ಗಳನ್ನು ಒದಗಿಸುವಂತೆ ಉಪಮುಖ್ಯಮಂತ್ರಿ ತಕ್ಷಣ ಕಂಪನಿಗೆ ಆದೇಶಿಸಿದರು. ಕಂಪನಿಯು ಸಕಾರಾತ್ಮಕವಾಗಿ ಸ್ಪಂದಿಸಿತು ಮತ್ತು ಟ್ಯಾಂಕರ್ನಲ್ಲಿರುವ ಆಮ್ಲಜನಕವನ್ನು ಆಸ್ಪತ್ರೆಗೆ ಕಳುಹಿಸಲು ಒಪ್ಪಿಕೊಂಡಿತು.
ಯುನಿವರ್ಸಲ್ ಕಂಪನಿಯಿಂದ ಆಕ್ಸಿಜನ್ ವ್ಯವಸ್ಥೆ ಮಾಡಿದ ಡಿಸಿಎಂ ಅವರು ಮಲ್ಲೇಶ್ವರ ಪೊಲೀಸರ ಜತೆಯೂ ಮಾತನಾಡಿ ಆಮ್ಲಜನಕದ ನಿರಾತಂಕ ಸಾಗಣೆಗೆ ನೆರವಾಗುವಂತೆ ಸೂಚಿಸಿದ್ದಾರೆ.
ಆಮ್ಲಜನಕ ಬರದಿರುತ್ತಿದ್ದರೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಸಾವುಗಳು ಸಂಭವಿಸಿದಂತೆಯೇ ಇಲ್ಲಿ ಕೂಡ ಅನೇಕ ಮಂದಿ ಸಾವನ್ನಪ್ಪುತ್ತಿದ್ದರು.
ಮಧ್ಯರಾತ್ರಿ 12.45ರಿಂದ ಬೆಳಗಿನ ಜಾವ 4 ಗಂಟೆ ವರೆಗೂ ಆಕ್ಸಿಜನ್ ಕಾರ್ಯಾಚರಣೆಯಲ್ಲಿ ಭಾಗಿಯಾದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೊನೆಗೂ ದೊಡ್ಡ ದುರಂತವನ್ನು ತಪ್ಪಿಸುಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಯ ಸಮಯ ಪ್ರಜ್ಞೆಯನ್ನು ಉಪಮುಖ್ಯಮಂತ್ರಿ ಶ್ಲಾಘಿಸಿದ್ದು, ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸೋಂಕಿತರ ಜೀವ ಉಳಿಸಿದ್ದಾಗಿ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸರಿಗೂ ಕೃತಜ್ಞತೆ ಸಲ್ಲಿಸಿದರು. ಬಳಿಕೆ ಬೆಳಗಿನ ಜಾವ 4.30 ಗಂಟೆಯ ಹೊತ್ತಿಗೆ ಇಡೀ ಆಸ್ಪತ್ರೆಯ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕನ ಮಾಡಿದ್ದಾರೆ.