ಬೆಂಗಳೂರು, ಮೇ.06 (DaijiworldNews/PY): ಕೊರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು 1.20 ಲಕ್ಷ ಪಡೆದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವೆಂಕಟ ಸುಬ್ಬರಾವ್ (28), ಮಂಜುನಾಥ್ (31) ಹಾಗೂ ಇನ್ನೊಂದು ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುನೀತ್ (31) ಎಂದು ಗುರುತಿಸಲಾಗಿದೆ.
ಕೊರೊನಾ ಸೋಂಕಿತ ಮಹಿಳೆಯೋರ್ವರು ಚಿಕಿತ್ಸೆಗಾಗಿ ನೆಲಮಂಗಲದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಹಾಸಿಗೆ ದೊರಕದೆ ಪರದಾಡುತ್ತಿದ್ದರು. ಈ ಸಂದರ್ಭ 1.20 ಲಕ್ಷ ನೀಡಿದರೆ ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುವುದಾಗಿ ಆರೋಪಿಗಳು ಹೇಳಿದ್ದರು.
ಹಾಸಿಗೆಯ ಅವಶ್ಯಕತೆ ಇದ್ದ ಕಾರಣ ಸೋಂಕಿತೆಯ ಮಗ ಲಕ್ಷ್ಮೀಶ ಎನ್ನುವವರು ಆರೋಪಿಗಳಿಗೆ 50 ಸಾವಿರ ರೂ. ಗೂಗಲ್ ಪೇ ಮೂಲಕ ಹಾಗೂ 70 ಸಾವಿರ ನಗದನ್ನು ನೀಡಿದ್ದರು. ಬಳಿಕೆ ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ರೋಗಿ ಸಾವನ್ನಪಿದ್ದರು.
ಈ ಘಟನೆಯಿಂದ ಬೇಸರಗೊಂಡ ಮೃತರ ಪುತ್ರ ಲಕ್ಷ್ಮೀಶ ಆರೋಪಿಗಳು ಹಾಸಿಗೆಗಾಗಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಮಾಹಿತಿಯ ಮೇರೆಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.