ಬೆಂಗಳೂರು, ಮೇ 06 (DaijiworldNews/MS): ಆಕ್ಸಿಜನ್ ಹಂಚಿಕೆಯ ಕೋಟಾದ ಅನ್ವಯ ಕರ್ನಾಟಕ ರಾಜ್ಯಕ್ಕೆ ತಕ್ಷಣದಿಂದ ಪ್ರತಿ ದಿನಕ್ಕೆ 1,200 ಟನ್ ಅಮ್ಲಜನಕ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಕೊರೊನಾಕ್ಕೆ ಸಂಬಂಧಪಟ್ಟಂತೆ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ‘ಆಕ್ಸಿಜನ್ ಹಂಚಿಕೆಯ ಕೋಟಾ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಏಪ್ರಿಲ್ 30ರಂದು ಸಲ್ಲಿಸಿರುವ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸುವವರೆಗೂ ಪ್ರತಿನಿತ್ಯ 1,200 ಟನ್ ಕೋಟಾ ಮುಂದುವರೆಸಬೇಕು’ ಎಂದು ಹೇಳಿತು. ಅಲ್ಲದೆ ಎಲ್ಲ ರಾಜ್ಯಗಳಿಗೂ ಆಮ್ಲಜನಕದ ಬಫರ್ ಸ್ಟಾಕ್ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದು ಇದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯಕ್ಕೆ ಆಮ್ಲಜನಕ ಹಂಚಿಕೆಯ ಪಾಲಿನಂತೆ 865 ಟನ್ಗಳಿಂದ 965 ಟನ್ಗಳಿಗೆ ಹೆಚ್ಚಿಸಲು ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ವಿಚಾರಣೆಯ ಪ್ರಾರಂಭದಲ್ಲೇ ಕೋರ್ಟ್ ಗೆ ಮಾಹಿತಿ ನೀಡಿತು. ಕೊರೊನಾ ಪ್ರಕರಣಗಳ ಹೆಚ್ಚಳದ ಆಧಾರದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಪರಿಶೀಲಿಸಿ, ನಾಲ್ಕು ದಿನಗಳೊಳಗೆ ಹೊಸದಾಗಿ ಆಕ್ಸಿಜನ್ ನ ಪರಿಷ್ಕೃತ ಬೇಡಿಕೆ ಪತ್ರ ಸಲ್ಲಿಸುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ರಾಜ್ಯದಲ್ಲೇ ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಆದರೂ, ವಿಶಾಖಪಟ್ಟಣ, ಒಡಿಶಾ ಮತ್ತು ಕೇರಳದಿಂದ ಆಮ್ಲಜನಕ ತರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ನ್ಯಾಯಲಯಕ್ಕೆ ತಿಳಿಸಿದ್ದು, ಇದಕ್ಕೆ ವಿಭಾಗೀಯ ಪೀಠ ‘ಕೇಂದ್ರ ಸರ್ಕಾರ ರಾಜ್ಯದಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನೇ ಬಳಸಿಕೊಳ್ಳಲು ಅವಕಾಶ ನೀಡಬಹುದು’ ಎಂದು ಹೇಳಿತು.