ತಿರುವನಂತಪುರಂ, ಮೇ.06 (DaijiworldNews/PY): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಮೇ 8 ರಿಂದ ಮೇ 16 ರ ತನಕ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ.
ಈ ಬಗ್ಗೆ ಕೇರಳದ ಸಿಎಂ ಕಚೇರಿ ಟ್ವೀಟ್ ಮಾಡಿದ್ದು, "ಸಿಎಂ ಅವರ ನಿರ್ದೇಶನದಂತೆ ಇಡೀ ಕೇರಳ ರಾಜ್ಯ ಮೇ ಮೇ 8 ರಿಂದ ಮೇ 16ರವರೆಗೆ ಲಾಕ್ಡೌನ್ ಆಗಲಿದೆ" ಎಂದು ತಿಳಿಸಿದೆ.
"ಬುಧವಾರದಂದು ಕೇರಳದಲ್ಲಿ 41,953 ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಕೇರಳದ ಪರಿಸ್ಥಿತಿ ಗಂಭೀರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ" ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದರು.
ಪ್ರಸ್ತುತ ಕೊರೊನಾ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸುವ ತೀರ್ಮಾನವನ್ನು ಕೇರಳ ಸರ್ಕಾರ ಕೈಗೊಂಡಿದೆ.
ಲಾಕ್ ಡೌನ್ನಿಂದ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುವುದು. ಆದರೆ, ಸಮಯ ನಿಗದಿ ಪಡಿಸಲಾಗುವುದು. ರಾಜ್ಯದಲ್ಲಿ ಈಗ ನಿಯಂತ್ರಣಗಳಿದ್ದರೂ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿಲ್ಲ. ಬುಧವಾರ ಸೋಂಕಿತರ ಪ್ರಮಾಣ 40 ಸಾವಿರವನ್ನು ದಾಟಿತ್ತು. ಒಂದು ವಾರದ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ದಿನಂಪ್ರತಿ ಸೋಂಕಿತರ ಪ್ರಮಾಣ 25.69 ಕ್ಕೆ ಏರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಲಾಕ್ ಡೌನ್ ಸರಕಾರ ತೀರ್ಮಾನಿಸಿದೆ.