ನವದೆಹಲಿ, ಮೇ. 06 (DaijiworldNews/HR): "ಸ್ವಲ್ಪ ಪ್ರಮಾಣದ ರೋಗ ಲಕ್ಷಣ ಇರುವ ಸೋಂಕಿತರಲ್ಲೂ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾಗುತ್ತಿರುವುದಕ್ಕೆ, ಅವರು ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ಗಳನ್ನು ಬಳಸುತ್ತಿರುವುದು ಕಾರಣವಾಗಿರಬಹುದು" ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಎಚ್ಚರಿಕೆ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಗುಲೇರಿಯಾ, "ಸ್ಟಿರಾಯ್ಡ್ ಉಪಯೋಗಿಸಿದ ರೋಗಿಗಳಲ್ಲಿ, ವೈರಸ್ ದ್ವಿಗುಣ ಪ್ರಮಾಣ ಹೆಚ್ಚಳವಿರುವ ಮತ್ತು ಅದರಿಂದಾಗಿ ಅವರ ದೇಹದಲ್ಲಿ ಆಕ್ಸಿಜನ್ ಮಟ್ಟಕುಸಿಯುತ್ತಿರುವುದು ದೇಶದ ಹಲವು ಆಸ್ಪತ್ರೆಗಳಲ್ಲಿ ಕಂಡುಬಂದಿದೆ" ಎಂದರು.
ಇನ್ನು ಕೊರೊನಾ ಸೋಂಕಿನ ಮೊದಲ ಹಂತದಲ್ಲಿ ಸ್ಟಿರಾಯ್ಡ್ ಪಡೆದುಕೊಳ್ಳುವುದು, ದೇಹದಲ್ಲಿ ವೈರಸ್ ಪ್ರಮಾಣ ಹೆಚ್ಚಳಕ್ಕೆ ಉತ್ತೇಜನ ನೀಡಬಲ್ಲದು. ಹಾಗಾಗಿ ಇದರ ಪರಿಣಾಮವಾಗಿಯೇ ಸ್ವಲ್ಪ ಪ್ರಮಾಣದ ಸೋಂಕಿನ ಲಕ್ಷಣ ಹೊಂದಿರುವವರು ನಂತರ ಗಂಭೀರ ಸ್ವರೂಪದ ಸಮಸ್ಯೆಗೆ ತುತ್ತಾಗಿ ನ್ಯುಮೋನಿಯಾಕ್ಕೆ ತುತ್ತಾಗುತ್ತಿದ್ದಾರೆ. ಸೋಂಕಿನ ಮೊದಲ 5 ದಿನಗಳಲ್ಲಿ ಸ್ಟಿರಾಯ್ಡ್ಗಳು ಯಾವುದೇ ಪರಿಣಾಮ ಹೊಂದಿರುವುದಿಲ್ಲ. ಹಾಗಾಗಿ ಸ್ವಲ್ಪ ಪ್ರಮಾಣದ ಲಕ್ಷಣ ಹೊಂದಿರುವವರು ಯಾವುದೇ ಕಾರಣಕ್ಕೂ ಸ್ಟೆರಾಯ್ಡ್ ಬಳಸಬಾರದು ಮತ್ತು ಸಿ.ಟಿ.ಸ್ಕ್ಯಾನ್ ಮಾಡಿಸಬಾರದು" ಎಂದು ಹೇಳಿದ್ದಾರೆ.