ನವದೆಹಲಿ, ಮೇ.06 (DaijiworldNews/PY): ಕೊರೊನಾ ಲಾಕ್ಡೌನ್ನ ನಡುವೆ ಪವಿತ್ರ ರಂಜಾನ್ ತಿಂಗಳ ಕೊನೆಯ ಶುಕ್ರವಾರ ಹಾಗೂ ಈದ್ ಪ್ರಾರ್ಥನೆಗಳಿಗೆ ಸಂಬಂಧಿಸಿದಂತೆ ಮುಸ್ಲಿಮರಿಗೆ ಜಮಾತ್-ಇ-ಇಸ್ಲಾಮಿ ಹಿಂದ್ನ ಶರಿಯಾ ಕೌನ್ಸಿಲ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
"ಪ್ರಸ್ತುತ ಪರಿಸ್ಥಿತಿಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಸ್ಥಳೀಯ ಅಧಿಕಾರಿಗಳು ಪ್ರಾರ್ಥನೆಗೆ ಅನುಮತಿ ನೀಡಿದರೆ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಅನುಮತಿ ಇಲ್ಲದ ಸಂದರ್ಭ, ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಅವರು ಶುಕ್ರವಾರ ಅಥವಾ ಜೋಹರ್ ಪ್ರಾರ್ಥನೆ ಸಲ್ಲಿಸಬಹುದು. ಅದಕ್ಕಿಂತ ಕಡಿಮೆ ಮಂದಿ ಇದ್ದರೆ ಜೋಹರ್ ಪ್ರಾರ್ಥನೆಯನ್ನು ಪ್ರತ್ಯೇಕವಾಗಿ ಮಾಡಬಹುದು" ಎಂದು ಶರಿಯಾ ಕೌನ್ಸಿಲ್ ಕಾರ್ಯದರ್ಶಿಮೌಲಾನಾ ರಝಿಯುಲ್ ಇಸ್ಲಾಂ ನಾದ್ವಿ ತಿಳಿಸಿದ್ದಾರೆ.
"ರಂಜಾನ್ನ ಕೊನೆಯ ದಿನಗಳ ಸಂದರ್ಭ ಬಜಾರ್ಗಳಲ್ಲಿ ಶಾಪಿಂಗ್ಗಾಗಿ ಜನ ಸೇರುವುದನ್ನು ತಪ್ಪಿಸಬೇಕು. ಈದ್ ದಿನದಂದು ಹೊಸ ಅಥವಾ ಹಳೆಯ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಓರ್ವ ಪ್ರಾರ್ಥನೆ ಸಲ್ಲಿಸಬೇಕು" ಎಂದು ಕೌನ್ಸಿಲ್ ತಿಳಿಸಿದೆ.
ಕೌನ್ಸಿಲ್ನ ಮಾರ್ಗಸೂಚಿಯ ಪ್ರಕಾರ, "ಈದ್ ಉಲ್ ಫಿತ್ರ್ ಪ್ರಾರ್ಥನೆಗಳನ್ನು ಈದ್ಗಾಗಳಲ್ಲಿ, ಜಮಾ ಮಸೀದಿಗಳಲ್ಲಿ ಅಥವಾ ಸ್ಥಳೀಯ ಮಸೀದಿಗಳಲ್ಲಿ ಮಾಡಬೇಕು. ಪ್ರಸ್ತುತ ಸಂದರ್ಭ ಎಷ್ಟು ಮಂದಿಗೆ ಅವಕಾಶ ಇದೆ ಎನ್ನುವ ಆಧಾರದ ಮೇಲೆ ಪ್ರಾರ್ಥನೆ ಸಲ್ಲಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಮುಖ್ಯ" ಎಂದು ತಿಳಿಸಿದೆ.
"ಈದ್ ಪ್ರಾರ್ಥನೆಯ ಬಳಿಕ ಕೈ ಕುಲುಕುವುದು, ಆಲಂಗಿಸುವುದು ಕಡ್ಡಾಯವಲ್ಲ. ಒಂದು ಮನೆಯಲ್ಲಿ ನಾಲ್ಕು ಮಂದಿ ಇದ್ದರೆ, ಅವರು ಮನೆಯಲ್ಲಿ ಎರಡು ರಕತ್-ಈದ್-ಉಲ್-ಫಿತ್ರ್ ಪ್ರಾರ್ಥನೆಯನ್ನು ತಕ್ಬೀರತ್ನೊಂದಿಗೆ ಮಾಡಬಹುದು. ಪ್ರಾರ್ಥನೆಯ ಬಳಿಕ ಖುತ್ಬಾ (ಧರ್ಮೋಪದೇಶ) ನೀಡಬಹುದು, ಆದರೆ ಅದು ಕಡ್ಡಾಯವಲ್ಲ" ಎಂದು ಕೌನ್ಸಿಲ್ ಹೇಳಿದೆ.
"ಈದ್ ದಿನದಂದು ಜನರನ್ನು ಭೇಟಿಯಾಗಲು ಹಾಗೂ ಶುಭಾಶಯ ಕೋರಲು ಹೋಗುವಂತಿಲ್ಲ" ಎಂದು ಶರಿಯಾ ಕೌನ್ಸಿಲ್ ಸೂಚನೆ ನೀಡಿದೆ.
"ಪ್ರಸ್ತುತ ಪರಿಸ್ಥಿತಿಯ ಸಂದರ್ಭ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ" ಎಂದು ಕೌನ್ಸಿಲ್ ತಿಳಿಸಿದೆ.