ನವದೆಹಲಿ, ಮೇ 06 (DaijiworldNews/MS): ನವದೆಹಲಿಯ ಛತ್ರಸಾಲಾ ಸ್ಟೇಡಿಯಂನಲ್ಲಿ ಎರಡು ತಂಡಗಳ ನಡೆದ ಗುಂಪು ಘರ್ಷಣೆಯಲ್ಲಿ 23 ವರ್ಷದ ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್ ಕುಸ್ತಿಪಟು ಒಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತನನ್ನು ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ನ ಮಗ ಸಾಗರ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯ ಹಿಂದೆ ಒಲಂಪಿಕ್ ಪದಕಗಳ ವಿಜೇತ ಸುಶೀಲ್ ಕುಮಾರ್ ಪಾತ್ರವಿರುವ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಏಕಾಏಕಿ ನುಗ್ಗಿದ ಕೆಲವು ಕುಸ್ತಿಪಟುಗಳು ಸ್ಟೇಡಿಯಂನಲ್ಲಿ ಇದ್ದ ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿದ್ದಾರೆ. ಘರ್ಷಣೆಯಲ್ಲಿ ಒಬ್ಬ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ
ತಮ್ಮ ಮೇಲಿನ ಆರೋಪವನ್ನು ಸುಶೀಲ್ ಕುಮಾರ್ ಅಲ್ಲಗಳೆದಿದ್ದಾರೆ. ಸ್ಟೇಡಿಯಂಗೆ ನುಗ್ಗಿ ಹಲ್ಲೆ ಮಾಡಿದವರು ನಮ್ಮ ಕುಸ್ತಿಪಟುಗಳಲ್ಲ. ತಮ್ಮ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
“ ಗಾಯಾಳುಗಳನ್ನು ಸೋನು ಮಹಲ್ (35) ಮತ್ತು ಅಮಿತ್ ಕುಮಾರ್ (27) ಎಂದು ಗುರುತಿಸಲಾಗಿದೆ. ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಒಬ್ಬ ಪ್ರಿನ್ಸ್ ದಲಾಲ್ (24) ಎಂಬಾತನನ್ನು ಬಂಧಿಸಿದ್ದೇವೆ. ಸ್ಥಳದಿಂದ ಡಬಲ್ ಬ್ಯಾರೆಲ್ ಗನ್ ವಶಪಡಿಸಿಕೊಂಡಿದ್ದೇವೆ . ಇನ್ನು ಸುಶೀಲ್ ಕುಮಾರ್ ಅವರ ವಿರುದ್ಧ ಆರೋಪಗಳು ಕೇಳಿ ಬಂದ ಕಾರಣ ಅವರ ವಿಚಾರಣೆಗಾಗಿ ಪೊಲೀಸ ತಂಡವನ್ನು ಮನೆಗೆ ಕಳುಹಿಸಲಾಗಿದ್ದು ಆದರೆ ಅವರು ಕಾಣೆಯಾಗಿದ್ದಾರೆ, ಅವರಿಗಾಗಿ ಶೋಧ ನಡೆಸುತ್ತಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಲಾಗಿದೆ, ”ಎಂದು ಹೆಚ್ಚುವರಿ ಡಿಸಿಪಿ (ವಾಯುವ್ಯ) ಡಾ.ಗುರಿಕ್ಬಾಲ್ ಸಿಂಗ್ ಸಿಧು ಹೇಳಿದ್ದಾರೆ