ನವದೆಹಲಿ, ಮೇ.05 (DaijiworldNews/PY): "ಅಧಿಕಾರಿಗಳನ್ನು ಜೈಲಿಗೆ ಹಾಕುವುದರಿಂದ ಅಥವಾ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವ ಮೂಲಕ ದೆಹಲಿಗೆ ಆಕ್ಸಿಜನ್ ದೊರೆಯುವುದಿಲ್ಲ. ಜನರ ಜೀವ ಉಳಿಸುವ ಕ್ರಮ ಕೈಗೊಳ್ಳುವುದು ಮುಖ್ಯ" ಎಂದು ಬುಧವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಾಂಗ ನಿಂದನೆ ನೋಟಿಸ್ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ದ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯ ಈ ಅಭಿಪ್ರಾಯ ತಿಳಿಸಿದೆ.
ವಿಚಾರಣೆಯ ಸಂದರ್ಭ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, "ಮೇ 3ರವರೆಗೆ ದೆಹಲಿಗೆ ಎಷ್ಟು ಆಮ್ಲಜಕನ ಪೂರೈಕೆ ಮಾಡಲಾಗಿದೆ. ಈ ಬಗ್ಗೆ ವಿವರ ಸಲ್ಲಿಸಬೇಕು" ಎಂದು ಕೇಂದ್ರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
"ಮೇ 3ರಿಂದ ದೆಹಲಿಗೆ ಪ್ರತಿ ದಿನ 700 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಬೇಕು" ಎಂದು ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಆದೇಶಿಸಿದೆ.
"ಕೊರೊನಾ ನಿಯಂತ್ರಿಸಲು ಕೇಂದ್ರ ಹಾಗೂ ದೆಹಲಿ ಸರ್ಕಾರ ಅತ್ಯುತ್ತಮ ಕಾರ್ಯ ಕೈಗೊಂಡಿದೆ" ಎಂದು ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.