ಬೆಂಗಳೂರು, ಮೇ 05 (DaijiworldNews/MB) : ಬೆಂಗಳೂರು ದಕ್ಷಿಣದ 'ಎಳೆ ಸಂಸದ' ಈ ಸಮಾಜಕ್ಕೆ ಅಂಟಿದ ಕರೋನಾಗಿಂತಲೂ ಭೀಕರ ವೈರಸ್ ಎಂದು ಕಾಂಗ್ರೆಸ್, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯರ ಕಾಲೆಳೆದಿದೆ.
"ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟ ಹಾಸಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ ಬ್ಲಾಕ್ ಮಾಡುವ ಹಗರಣ ನಡೆಯುತ್ತಿದೆ" ಎಂದು ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದೆ.
ತೇಜಸ್ವಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವಾರು ಮಂದಿಯ ಮೇಲೆ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬೆಂಗಳೂರು ದಕ್ಷಿಣದ 'ಎಳೆ ಸಂಸದ' ಈ ಸಮಾಜಕ್ಕೆ ಅಂಟಿದ ಕರೋನಾಗಿಂತಲೂ ಭೀಕರ ವೈರಸ್. ತಮ್ಮ ವೈಫಲ್ಯ, ಭ್ರಷ್ಟಾಚಾರ ಮರೆಮಾಚಲು ಬಿಜೆಪಿ ಮೊರೆ ಹೋಗುವುದೇ ಕೋಮು ಬಣ್ಣಕ್ಕೆ. ಬಿಬಿಎಂಪಿ ವಾರ್ ರೂಮಿನಲ್ಲಿ ಸರ್ವ ಜಾತಿ, ಜನಾಂಗದ 205 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ತಲೆಮಾಸದ ಎಳೆ ಸಂಸದನ ಕೋಮುಕಣ್ಣಿಗೆ ಒಂದು ಕೋಮಿನ 16 ಜನರಷ್ಟೇ ಕಂಡಿದ್ದಾರೆ'' ಎಂದು ವಾಗ್ದಾಳಿ ನಡೆಸಿದೆ.
''ಸಂಕಟದ ಹೊತ್ತಿನಲ್ಲೂ ಬಿಜೆಪಿಗರ ರಕ್ತದೊಳಗೆ ಅಡಕವಾಗಿರುವ ವಿಷವನ್ನು ಬಿಡಲಾರರು. ಕಳೆದ ಭಾರಿ ತಮ್ಮ ವೈಫಲ್ಯಕ್ಕೆ "ತಬ್ಲಿಘಿ" ಹೆಸರನ್ನು ಬಳಸಿದ್ದಕ್ಕೆ ಕೋರ್ಟ್ ಛಿಮಾರಿ ಹಾಕಿದ್ದು ಮರೆತು ಈಗಲೂ ಮತ್ತೆ ಕೋಮು ಬಣ್ಣ ಬಡಿಯುತ್ತಿದ್ದಾರೆ. ಬಿಜೆಪಿ ಈ ದೇಶಕ್ಕೆ ಅಂಟಿದ ಮಾರಣಾಂತಿಕ ವೈರಸ್. ಬಿಜೆಪಿ ಮುಕ್ತವಾದರೆ ಕೊರೊನಾವೂ ಮುಕ್ತವಾದಂತೆ'' ಎಂದು ಅಭಿಪ್ರಾಯಿಸಿದೆ.
''ಬೆಂಗಳೂರು, ಚಾಮರಾಜನಗರ, ಬೆಳಗಾವಿ, ಕಲ್ಬುರ್ಗಿ ಎಲ್ಲಾ ಕಡೆಯಲ್ಲೂ ಭ್ರಷ್ಟ ಬಿಜೆಪಿ ಸರ್ಕಾರ ಪ್ರಾಣವಾಯು ನೀಡದೆ ಜನರನ್ನು ಕೊಲ್ಲುತ್ತಿದೆ. ತಮ್ಮ ಕೊಲೆಗಳನ್ನು ಮರೆಮಾಚಲು ನೀಚ ರಾಜಕೀಯ ಮಾಡುತ್ತಿದೆ. ಬೆಡ್ ಹಂಚಿಕೆಯ ಕಮಿಷನ್ ದಂಧೆಯಲ್ಲಿ ಆರೋಗ್ಯ ಸಚಿವರಿಂದ ಹಿಡಿದು ಎಳೆ ಸಂಸದನವರೆಗೂ ಪಾಲಿದೆ'' ಎಂದು ದೂರಿದೆ.