ಚಿಕ್ಕಮಗಳೂರು, ಮೇ 05 (DaijiworldNews/MB) : ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ದೀದಿ ವಿರುದ್ದ ಕಿಡಿಕಾರಿದ್ದು, ಯಾವ ಪುಣ್ಯ ಕಾರ್ಯ ಮಾಡಿದರೂ ದೀದಿಯ ರಕ್ತಸಿಕ್ತ ಕೈಗಳನ್ನು ತೊಳೆಯಲಾಗದು ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಅವರು, ''ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದಂತಹಾ ಸರ್ಕಾರವೇ ಪಶ್ಚಿಮ ಬಂಗಾಳದಲ್ಲಿ ಗೂಂಡಾಗಳ ಜೊತೆ ಕೈಜೋಡಿಸಿದೆ. ದೀದಿಯ ಆ ರಕ್ತಸಿಕ್ತ ಕೈಗಳಿಂದ ಅಧಿಕಾರ ನಡೆಸಿದರೆ ಪಾಪ ಇನ್ನಷ್ಟು ಅಧಿಕವಾಗುತ್ತದೆಯೇ ಹೊರತು ಯಾವುದೇ ಪುಣ್ಯ ಬರಲ್ಲ'' ಎಂದು ಕಿಡಿಕಾರಿದರು.
''ಚುನಾವಣೆಗೂ ಮುನ್ನ ದೌರ್ಜನ್ಯ ನಡೆಸಿಯೇ ಚುನಾವಣೆ ನಡೆಸಲು ಪ್ರಯತ್ನ ಮಾಡಿದರು ಆದರೆ ಅದಕ್ಕೆ ಅವಕಾಶವೇ ಸಿಕ್ಕಿಲ್ಲವೆಂದು ಈಗ ಚುನಾವಣೆ ಗೆದ್ದು ಬಿಜೆಪಿಯ ಬೆಳವಣಿಗೆಯನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದೀರಾ'' ಎಂದು ಪ್ರಶ್ನಿಸಿದ ಸಿ.ಟಿ.ರವಿ, ''ದೀದಿ ಸರ್ಕಾರದ ಈ ನಡೆಯನ್ನು ನಾವು ಖಂಡಿಸುತ್ತೇವೆ'' ಎಂದರು.
''ಕಳೆದ 72 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮನೆಗಳಿಗೆ, ಬಿಜೆಪಿ ಕಚೇರಿಯನ್ನು ಬೆಂಕಿ ಹಾಕಲಾಗಿದೆ, ನಮ್ಮ ಕಾರ್ಯಕರ್ತರ ಅಂಗಡಿಗಳಲ್ಲಿ ಲೂಟಿ ಮಾಡಲಾಗಿದೆ. ಅಷ್ಟೇ ಅಲ್ಲದೇ 12ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ 281ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ'' ಎಂದು ಹೇಳಿದ ಅವರು, ''ಹತ್ಯೆಯ ಮೂಲಕ ಒಂದು ರಾಜಕೀಯ ಪಕ್ಷದ ಧ್ವನಿ ಕ್ಷೀಣಿಸುವಂತೆ ಮಾಡಲಾಗದು. ಈ ಹತ್ಯೆಯ ಮೂಲಕ ಯಾರನ್ನೂ ಹತ್ತಿಕ್ಕಬಹುದು ಎಂಬ ಕೆಟ್ಟ ಯೋಚನೆ ಸರಿಯಲ್ಲ. ಈ ಹತ್ಯಾ ರಾಜಕಾರಣ ಕೊನೆಯಾಗಬೇಕು'' ಎಂದು ಹೇಳಿದರು.
''ನಾವು ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸಿ, ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದ್ದೇವೆ. ಬಿಜೆಪಿ ಎಂದಿಗೂ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ನೈತಿಕ ಧೈರ್ಯ ತುಂಬುವ ಕಾರ್ಯ ಅವರು ಮಾಡಲಿದ್ದಾರೆ'' ಎಂದು ಕೂಡಾ ಹೇಳಿದರು.