ಮೈಸೂರು, ಮೇ 05 (DaijiworldNews/MB) : ''ಮೈಸೂರಿನ ಜಿಲ್ಲಾಡಳಿತ ಹಾಗೂ ಸಪ್ಲೈಯರ್ಸ್ ಸಕಾಲದಲ್ಲಿ ಸ್ಪಂದಿಸಲಿಲ್ಲ'' ಎಂದು ತಮ್ಮ ಮೇಲೆ ಆರೋಪ ಮಾಡಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ವಿರುದ್ದ ವಾಗ್ದಾಳಿ ನಡೆಸಿರುವ ಮೈಸೂರು ಜಿಲ್ಲಾಧಿಕಾರಿ, ''ಸರಿಯಾಗಿ ನಿರ್ವಹಣೆ ಮಾಡದೆಯೇ ಚಾಮರಾಜನಗರ ಡಿಸಿ ಆಕ್ಸಿಜನ್ ಸಪ್ಲೈ ವಿಚಾರದಲ್ಲಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಾವು ಜನರ ಜೀವ ಉಳಿಸಲು 24 ಗಂಟೆ ಕೆಲಸ ಮಾಡುತ್ತೇವೆ. ಅಷ್ಟು ಕೆಲಸ ಮಾಡಿದರೂ ಈ ರೀತಿ ಹೇಳಿದರೆ ನಮಗೂ ನೋವಾಗುತ್ತದೆ'' ಎಂದು ಭಾವುಕರಾಗಿದ್ದಾರೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನಪ್ಪಿದ್ದಾರೆ. ಮೈಸೂರಿನ ಜಿಲ್ಲಾಡಳಿತ ಆಕ್ಸಿಜನ್ ಲಭ್ಯ ಮಾಡುವ ವಿಚಾರದಲ್ಲಿ ಸ್ಪಂಧಿಸಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಂಧೂರಿ, ''ಚಾಮರಾಜನಗರ ಡಿಸಿ ಸರಿಯಾಗಿ ಕಾರ್ಯನಿರ್ವಹಿಸದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಆ ರೀತಿ ಆಗಿದ್ದರೆ ನಾವು ಯಾರಿಂದಲಾದರೂ ಆಕ್ಸಿಜನ್ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ'' ಎಂದು ದೂರಿದ್ದು, ಇದರೊಂದಿಗೆ ಮೇ 2 ಮತ್ತು 3 ರಂದು ಚಾಮರಾಜನಗರಕ್ಕೆ ಕಳುಹಿಸಿದ ಆಕ್ಸಿಜನ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಸಮಯ ಹಾಗೂ ಬಿಲ್ ಸಂಖ್ಯೆಯ ಜೊತೆಗೆ ಮಾಹಿತಿ ಬಹಿರಂಗ ಮಾಡಿದ್ದಾರೆ.
''ಈ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ನಮ್ಮ ಮೇಲೆ ಚಾಮರಾಜನಗರದ ಡಿಸಿ ಆರೋಪ ಮಾಡಿದ್ದಾರೆ. ನಾನು ಜಿಲ್ಲಾಧಿಕಾರಿಯಾಗಿ ಬೇರೆ ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ತಡೆದಿಲ್ಲ. ಈಗ ಮೈಸೂರಿಗೆ ಬಳ್ಳಾರಿಯಿಂದ ಕಡಿಮೆ ಆಕ್ಸಿಜನ್ ಸರಬರಾಜು ಆಗುತ್ತಿದೆ. ಈ ವಿಚಾರದಲ್ಲಿ ನಾನು ಬಳ್ಳಾರಿ ಡಿಸಿಯನ್ನು ದೂಷಿಸಲಾಗುವುದಿಲ್ಲ. ತಮ್ಮ ಜಿಲ್ಲೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ಅವರದ್ದೇ ಜವಾಬ್ದಾರಿ. ಅದು ಆಗದಿದ್ದರೆ ಮೇಲಾಧಿಕಾರಿಗೆ ತಿಳಿಸಬೇಕು. ಆದರೆ ಅದರಲ್ಲಿ ವಿಫಲವಾದ ಅವರು ನಮ್ಮ ಮೇಲೆ ದೂಷನೆ ಮಾಡುತ್ತಿದ್ದಾರೆ'' ಎಂದು ಹೇಳಿದರು.
''ನಾವು ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಸಿಲಿಂಡರ್ಗಳನ್ನು ಕಳುಹಿಸಿದ್ದೇವೆ. ಯಾರೂ ಕೂಡಾ ಆಸ್ಪತ್ರೆಯಿಂದ ಆಕ್ಸಿಜನ್ ಕಳುಹಿಸಿ ರಿಸ್ಕ್ ತೆಗೆದುಕೊಳ್ಳಲಾರರು. ಆದರೆ ನಿಮಗಾಗಿ ನಾನು ಅಂತಹ ರಿಸ್ಕ್ ತೆಗೆದುಕೊಂಡಿದ್ದೇನೆ. ಇದು ಮಾನವೀಯತೆ ಅಲ್ಲವೇ'' ಎಂದು ಪ್ರಶ್ನಿಸಿದರು.
''ಆಕ್ಸಿಜನ್ ಬೇಕೆಂದು ನಮ್ಮಲ್ಲಿ ಮೊದಲೇ ಕೇಳಿದ್ದರೆ ನಾವು ಕಳುಹಿಸುತ್ತಿದ್ದೆವು. ಆದರೆ ಅವರು ಸರಿಯಾದ ನಿರ್ವಹಣೆ ಮಾಡದೆ ಕೊನೆಗೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಈ ವಿಚಾರದಲ್ಲಿ ಮಾತನಾಡುತ್ತಿರಲಿಲ್ಲ. ಆದರೆ ಅವರು ಮಾಧ್ಯಮದಲ್ಲಿ ನಮ್ಮ ವಿರುದ್ದ ಆರೋಪ ಮಾಡಿದ್ದಾರೆ. ಸುಳ್ಳು ವಿಚಾರಗಳನ್ನು ಅವರು ಹೇಳಿದ್ದಾರೆ. 10 ವರ್ಷದ ಸೇವೆಯಲ್ಲಿ ನಾವು ಯಾವತ್ತೂ ಆ ರೀತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟೀಕರಣ ನೀಡುವುದು ಅಗತ್ಯವಾಗಿತ್ತು'' ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.