ನವದೆಹಲಿ, ಮೇ 05 (DaijiworldNews/MS): ಕೇರಳದಲ್ಲಿ ಕೋವಿಡ್ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದ್ದಾರೆ.
ಲಸಿಕೆ ಸದ್ಬಳಕೆ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು "ಆರೋಗ್ಯ ವೃತ್ತಿಪರರು ತಮ್ಮ ರಾಜ್ಯದಲ್ಲಿ ಅತ್ಯುತ್ತಮ ದಕ್ಷರಾಗಿದ್ದಾರೆ " ಎಂದು ಟ್ವೀಟ್ ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ, ಮಾದರಿ ನಡೆ ಎಂದು ಮೆಚ್ಚುಗೆ ನೀಡಿದ್ದಾರೆ.
'ಕೇರಳಕ್ಕೆ ಕೇಂದ್ರ ಸರ್ಕಾರದಿಂದ 73,38,806 ಡೋಸ್ ಲಸಿಕೆಗಳು ದೊರಕಿವೆ. ಒಬ್ಬರಿಗೆ ನೀಡಿದ ಬಳಿಕ ಪ್ರತಿ ಬಾಟಲಿಯಲ್ಲಿ ಲಭ್ಯವಿರುವ ಹೆಚ್ಚುವರಿ ಪ್ರಮಾಣವನ್ನೂ ವ್ಯರ್ಥವಾದಲು ಬಿಡದೆ ಅದನ್ನು ಬಳಸಿಕೊಂಡು ಬಳಸಿಕೊಂಡು ನಾವು 74,26,164 ಡೋಸ್ ಲಸಿಕೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ನಮ್ಮ ಹೃತ್ಪೂರ್ವಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ' ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಮೋದಿ, 'ಲಸಿಕೆ ಪೋಲು ತಪ್ಪಿಸುವ ಮೂಲಕ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಮಾದರಿಯಾಗಿದ್ದಾರೆ. ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸುವುದು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ' ಎಂದು ಉಲ್ಲೇಖಿಸಿದ್ದಾರೆ.