ಮಂಡ್ಯ, ಮೇ.05 (DaijiworldNews/PY): "ಚಾಮರಾಜನಗರ ದುರಂತ ಮರೆಮಾಚಲು ಇದೀಗ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಹೊರತರಲಾಗುತ್ತಿದೆ. ಅಸಲಿಗೆ ಬೆಡ್ ದಂಧೆ ಎನ್ನುವುದೇ ಡ್ರಾಮಾ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಾಮರಾಜನಗರ ದುರಂತವು ರಾಜ್ಯ ಸರ್ಕಾರದಿಂದ ಸಂಭವಿಸಿದ ದುರಂತ. ಘಟನೆಯ ಬಗ್ಗೆ ತನಿಖೆ ಮಾಡಿ ಯಾವುದೇ ಪ್ರಯೋಜನವಿಲ್ಲ. ತಪ್ಪು ಸರ್ಕಾರದ್ದೇ ಇರುವಾಗ ಯಾರಿಗೆ ಶಿಕ್ಷೆ ವಿಧಿಸುತ್ತೀರಿ?" ಎಂದು ಕೇಳಿದ್ದಾರೆ.
"ರಾಜ್ಯ ಸರ್ಕಾರ ತಪ್ಪು ಮಾಡಿದೆ. ಆಕ್ಸಿಜನ್ ಕೊರತೆ ಇದೆ ಎಂದು ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಚಾಮರಾಜನಗರ ದುರಂತ ಮರೆಮಾಚಲು ಇದೀಗ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಹೊರತರಲಾಗುತ್ತಿದೆ. ಅಸಲಿಗೆ ಬೆಡ್ ದಂಧೆ ಎನ್ನುವುದೇ ಡ್ರಾಮಾ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವರನ್ನು ಬಂಧಿಸಲಾಗಿದೆ. ಮೊದಲು ಆ ಮಹಿಳೆಯನ್ನು ಯಾರು ನೇಮಕ ಮಾಡಿದ್ದು ಎನ್ನುವುದನ್ನು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಅವರು, "ವಿಶ್ವಗುರು ಆಗಬೇಕು ಎನ್ನುವ ಉದ್ದೇಶದಿಂದ ನಮ್ಮ ದೇಶದಲ್ಲಿ ಉತ್ಪಾದನೆಯಾಗಿದ್ದ ಲಸಿಕೆಯನ್ನು ಬೇರೆ ದೇಶಕ್ಕೆ ಹಂಚಿದ್ದು ತಪ್ಪು. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಲಸಿಕೆ ಕೊರತೆ ಆರಂಭವಾಗಿದೆ. ಹೀಗಿದ್ದರೂ ಬೇರೆ ದೇಶಗಳಿಗೆ ಲಸಿಕೆ ಹಂಚಿದ್ದು ಏಕೆ?. ಮಾರ್ಚ್ನಲ್ಲಿಯೇ ಲಾಕ್ಡೌನ್ ಮಾಡುತ್ತಿದ್ದರೆ ಕೊರೊನಾ ಸಮಸ್ಯೆ ಇಷ್ಟು ಉದ್ಭವಿಸುತ್ತಿರಲಿಲ್ಲ" ಎಂದಿದ್ದಾರೆ.