ಬೆಂಗಳೂರು, ಮೇ 05 (DaijiworldNews/MB) : ಬಿಬಿಎಂಪಿ ಬೆಡ್ಗಳನ್ನು ಅಕ್ರಮವಾಗಿ ಬ್ಲಾಕಿಂಗ್ ಮಾಡುತ್ತಿದೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿ ಆರೋಪದಲ್ಲಿ ರಾಜ್ಯ ರಾಜಕಾರಣದಲ್ಲೇ ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಈ ಬಗ್ಗೆ ತನಿಖೆ ಚುರುಕಾಗಿದ್ದು ಸಿಸಿಬಿ ಅಧಿಕಾರಿಗಳು ಒಟ್ಟು ಎಂಟು ಜನರನ್ನು ವಶಕ್ಕೆ ಪಡೆದಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪದ ಸಮರ ನಡೆಯುತ್ತಲಿದೆ.
ಈ ಬಗ್ಗೆ ಬಿಜೆಪಿ ವಿರುದ್ದ ಆರೋಪ ಮಾಡಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ''ಹೆಣದಲ್ಲೂ ಹಣ ಮಾಡುವ ಭ್ರಷ್ಟ ಬಿಜೆಪಿಯ ಬಣ್ಣ ಬಯಲಾಗುತ್ತಿದೆ. ಕಳೆದ ವರ್ಷ ಗೋಲ್ಮಾಲ್ ಕೋವಿಡ್ ಸೆಂಟರ್ ಹೆಸರಲ್ಲಿ ಖಜಾನೆ ಲೂಟಿ ಹೊಡೆದಿದ್ದರು. ಈಗ ಬೆಡ್ ಹೆಸರಲ್ಲಿ ನೇರವಾಗಿ ಜನರ ದರೋಡೆಗೆ ನಿಂತಿದ್ದಾರೆ. ಬೆಡ್ ಬ್ಲಾಕಿಂಗ್ ಹಗರಣದ ಆರೋಪಿ ಬಿಜೆಪಿಯ ಹಲವು ನಾಯಕರಿಗೆ ಅತ್ಯಾಪ್ತೆಯಾಗಿರುವ ಕಾರಣ ರಾಜಾರೋಷವಾಗಿ ದಂಧೆ ನಡೆಯುತ್ತಿತ್ತು'' ಎಂದು ಆರೋಪಿಸಿದೆ.
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಹಗರಣದ ಹಿಂದೆ ಕಾಂಗ್ರೆಸ್ ಇದೆ ಎಂದು ದೂರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೋವಿಡ್ ಸಾಂಕ್ರಾಮಿಕದಿಂದ ಜನ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸಾಯುತ್ತಿರುವಾಗ, ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ತರಲು ನಿಮ್ಮವರು ಬೆಡ್ ದಂಧೆಯಲ್ಲಿ ತೊಡಗಿದ್ದಾರೆ. ಆರೋಪಿಗಳ ವಿರುದ್ಧ ಮಾತನಾಡಬೇಕಾದ ತಾವು ಅವರ ಪರವಾಗಿಯೇ ಮಾತಾಡುವುದು ನೀವೂ ಶಾಮೀಲಾಗಿರಬಹುದೆಂಬ ಅನುಮಾನ ಕಾಡುತ್ತಿದೆ'' ಎಂದು ಶಂಕೆ ವ್ಯಕ್ತಪಡಿದ್ದಾರೆ.
"ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟ ಹಾಸಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ ಬ್ಲಾಕ್ ಮಾಡುವ ಹಗರಣ ನಡೆಯುತ್ತಿದೆ" ಎಂಬುದನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ರೆಡ್ಡಿ ಹಾಗೂ ತಂಡವೂ ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದರು. ಇದೀಗ ಒಟ್ಟು ಎಂಟು ಜನರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.