ಬೆಂಗಳೂರು, ಮೇ.05 (DaijiworldNews/PY): ಅಕ್ರಮ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ತ್ವರಿತವಾಗಿ ನೂತನ ಸಾಫ್ಟ್ವೇರ್ ಅಭಿವೃದ್ದಿಗೆ ಸಾಫ್ಟ್ವೇರ್ ದಿಗ್ಗಜರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ ಅವರು, "ಇಂದು ಬೆಳಿಗ್ಗೆ ಶ್ರೀ ನಂದನ್ ನಿಲೇಕಣಿ ಅವರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ. ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ" ಎಂದು ತಿಳಿಸಿದ್ದಾರೆ.
"ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಈ ತಾಂತ್ರಿಕ ತಂಡವು, iSpirit @AProduct_nation ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆಗೆ ಹಸ್ತಕ್ಷೇಪ ರಹಿತ,ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಿದ್ದು, ಇಡೀ ತಂಡಕ್ಕೆ ಬೆಂಗಳೂರು ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.
ತೇಜಸ್ವಿಸೂರ್ಯ ಅವರ ಮನವಿಗೆ ಸ್ಪಂದಿಸಿರುವ ನಂದನ್ ನಿಲೇಕಣಿ ಹಾಗೂ ಐಸ್ಪಿರಿಟ್ ಸಂಸ್ಥೆ, "ಬೆಂಗಳೂರಿಗರಿಗೆ ಸೇವೆ ಸಲ್ಲಿಸಲು ನಾವು ಸಿದ್ದರಿದ್ದೇವೆ" ಎಂದು ತಿಳಿಸಿದ್ದಾರೆ.