ಅಲಹಾಬಾದ್, ಮೇ.05 (DaijiworldNews/PY): "ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವುದು ಯಾವುದೇ ಹತ್ಯಾಕಾಂಡಕ್ಕಿಂತ ಕಡಿಮೆ ಇಲ್ಲ" ಎಂದು ಅಲಹಾಬಾದ್ ಹೈಕೋರ್ಟ್ ಪರಿಗಣಿಸಿದ್ದು, ಉತ್ತರಪ್ರದೇಶ ಸರ್ಕಾರದ ವಿರುದ್ದ ಚಾಟಿ ಬೀಸಿದೆ.
ಸಾಂದರ್ಭಿಕ ಚಿತ್ರ
"ಆಕ್ಸಿಜನ್ ಕೊರತೆಯು, ಆಕ್ಸಿಜನ್ ಪೂರೈಕೆಯನ್ನು ನಿಭಾಯಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ನಡೆಸುವ ಹತ್ಯಾಕಾಂಡ" ಎಂದು ನ್ಯಾಯಾಲಯ ಹೇಳಿದೆ.
ಆಕ್ಸಿಜನ್ ಕೊರತೆಯ ಕಾರಣದಿಂದ ಉತ್ತರಪ್ರದೇಶದ ಮೀರತ್ ಹಾಗೂ ಲಕ್ನೋ ಜಿಲ್ಲೆಗಳಲ್ಲಿ ಕೊರೊನಾ ರೋಗಿಗಳು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆ ಹೈಕೋರ್ಟ್ ಈ ಹೇಳಿಕೆ ನೀಡಿದ್ದು, ಘಟನೆಯ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು ಎಂದು ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರು, ರಾಜ್ಯದಲ್ಲಿ ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿಯ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಸೂಕ್ತ ತನಿಖೆಗೆ ಆದೇಶ ನೀಡಿದ್ದಾರೆ.