ಬೆಂಗಳೂರು, ಮೇ 05 (DaijiworldNews/MS): ಲಾಕ್ ಡೌನ್ ಅವಧಿ ವಿಸ್ತರಣೆಗೆ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಾವೂ ಕೂಡ ಅವರ ಸಲಹೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರ 119ನೇ ಜನ್ಮದಿನ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿರೋ ಕೆ.ಸಿ ರೆಡ್ಡಿ ಪುತ್ತಳಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೇಶ ಹಾಗೂ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿರೋ ಹಿನ್ನೆಲೆಯಲ್ಲಿ ಹಾಗೂ ಸುಪ್ರೀಂ ಕೋರ್ಟ್ ಸೂಚನೆ ನೀಡುವ ವಿಚಾರವಾಗಿ ಇಂದು ಪ್ರಧಾನಿ ಮೋದಿ ಸಂಪುಟ ಸಭೆ ನಡೆಸಲಿದ್ದಾರೆ.ಸಭೆಯ ಬಳಿಕ ರಾಜ್ಯದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಮೋದಿ ಲಾಕ್ ಡೌನ್ ಮಾಡಿ ಅಂದ್ರೆ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು" ಎಂದು ಹೇಳಿದ್ದಾರೆ.
ಈಗಾಗಲೇ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಈ ಬಗ್ಗೆ ಇಂದು ಸಂಜೆಯೊಳಗಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.