ಬೆಂಗಳೂರು, ಮೇ 05 (DaijiworldNews/MS): ತೇಜಸ್ವಿ ಸೂರ್ಯ , ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರೇ, ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು BBMPಯ ಅಧಿಕಾರಿಗಳ ವಿರುದ್ಧವಲ್ಲ, ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ, ಸಚಿವರು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಶಾಸಕರು,ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ "ಕೋವಿಡ್ ಪ್ರಾರಂಭದ ದಿನಗಳಲ್ಲಿಯೇ ನಾನು ಪತ್ರಿಕಾಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆಸಹಿತ ಬಹಿರಂಗಗೊಳಿಸಿದ್ದೆ. ಅದರ ಜೊತೆ ಈಗ ನೀವು ಹೇಳುತ್ತಿರುವುದನ್ನೂ ಸೇರಿಸಿ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೇರಿ ತೇಜಸ್ವಿ ಸೂರ್ಯ ಅವರೆ ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ಬಂದು ಹತ್ತು ದಿನ ಆಯ್ತು ಅಂತೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ತೇಜಸ್ವಿ ಸೂರ್ಯ ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು" ? ಎಂದು ಪ್ರಶ್ನಿಸಿದ್ದಾರೆ.
"ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡ್ಕೊಳ್ಳಿ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಷಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ ತೇಜಸ್ವಿ ಸೂರ್ಯ ಅವರೇ, ಮುಖ್ಯ ಆರೋಪಿಗಳಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? ಅದನ್ನೂ ಓದಿ ಹೇಳಿಬಿಡಿ " ಎಂದು ಯುವ ಸಂಸದನನ್ನು ಕುಟುಕಿದ್ದಾರೆ.
" ಯಥಾ ರಾಜಾ ತಥಾ ಮಂತ್ರಿ'. 'ಮೈ ಬೀ ಕಾವೂಂಗಾ, ತುಮ್ ಬಿ ಕಾವೋ' ಎನ್ನುವುದೇ ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಘೋಷಣೆ. ಅದನ್ನೇ ನೀವೆಲ್ಲ ಮಾಡ್ತಿದ್ದೀರಿ. ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೆ ಅಲ್ಲವೇ ತೇಜಸ್ವಿ ಸೂರ್ಯ? ಮುಖ್ಯಮಂತ್ರಿಗಳಿಂದ ಕರ್ತವ್ಯಲೋಪ-ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳನ್ನು ಯಾಕೆ ಬಳಸಿಕೊಳ್ತೀರಿ? ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾವನ್ನು ಯಾಕೆ ಬಳಸಿಕೊಳ್ತೀರಿ ತೇಜಸ್ವಿ ಸೂರ್ಯ " ಎಂದು ಸವಾಲು ಹಾಕಿದ್ದಾರೆ
"ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ನಿಮ್ಮ ಕೇಂದ್ರ ಸರ್ಕಾರ ಏನು ಕಡಿದು ಕಟ್ಟೆ ಹಾಕಿದೆ ಅದನ್ನೂ ರಾಜ್ಯದ ಜನತೆಗೆ ತಿಳಿಸಿ .ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಮತದಾರರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ, ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ, ಸ್ಮಶಾನದಲ್ಲಿ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನ್" ಎಂದು ಪ್ರಶ್ನಿಸಿದ್ದಾರೆ.
"ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು ಹಣ ಸಂದಾಯವಾಗಿದೆ? ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ? ರಾಜ್ಯಕ್ಕೆ ವೆಂಟಿಲೇಟರ್, ಐಸಿಯು, ಆಕ್ಸಿಜನ್ ಎಷ್ಟು ಸಿಕ್ಕಿದೆ? ಮಾಹಿತಿ ಹಕ್ಕಿಗೆ ನಿಷೇಧ ಹೇರಿ ಪ್ರಧಾನಿ ನರೇಂದ್ರ ಮೋದಿ ರಕ್ಷಿಸುತ್ತಿರುವುದು ಯಾರನ್ನು ತಮ್ಮನ್ನೋ? ಅಧಿಕಾರಿಗಳನ್ನೋ? ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ, ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ 25 ಸಂಸದರು ಯಾವ ಬಿಲ ಸೇರಿದ್ದಾರೆ? ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ನರೇಂದ್ರ ಮೋದಿ ಎದುರು ಇಲಿಗಳಾಗಿ ಬಿಲ ಸೇರುವುದು ಯಾಕೆ?" ಎಂದು ವ್ಯಂಗ್ಯವಾಡಿದ್ದಾರೆ.