ಕೊಲ್ಕತ್ತಾ, ಮೇ.05 (DaijiworldNews/PY): ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮೂರನೇ ಬಾರಿಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿಯಾಗಿ ಬುಧವಾರ ಕೋಲ್ಕತ್ತಾದ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊರೊನಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ ಪ್ರಮಾಣವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್, ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರನ್ನು ಆಹ್ವಾನಿಸಲಾಗಿದೆ.
"ಸೋಮವಾರ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಟಿಎಂಸಿಯ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಶಾಸಕರ ಪ್ರಮಾಣವಚನ ಮೇ 6ರಂದು ನಿಗದಿಯಾಗಿದೆ. ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ನಿರ್ಗಮಿತ ವಿಧಾನ ಸಭಾಧ್ಯಕ್ಷ ಬಿಮನ್ ಬ್ಯಾನರ್ಜಿ ಅವರನ್ನು ಸೂಚಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ" ಎಂದು ಚಟರ್ಜಿ ತಿಳಿಸಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಮಮತಾ ಬ್ಯಾನರ್ಜಿ ಅವರು ಮೂರನೇ ಬಾರಿ ಪಶ್ಚಿಮಬಂಗಾಳದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.