ಬೆಂಗಳೂರು, ಮೇ 04 (DaijiworldNews/SM): ರಾಜ್ಯದಲ್ಲಿ ಬೆಡ್ ಗಳ ಕೊರತೆ ಹೆಚ್ಚಳವಾಗುತ್ತಿದೆ. ಎಷ್ಟೇ ಪ್ರಭಾವಿಗಳ ಮೂಲಕ ಮನವಿ ಮಾಡಿದರೂ ಬೆಡ್ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಐಸಿಯುಗಳಲ್ಲಿ ಆಕ್ಸಿಜನ್ ಬೆಡ್ ಗಳು ಸಿಗದೆ ಈಗಾಗಲೇ ಹಲವು ರೋಗಿಗಳು ಮೃತಪಟ್ಟಿದ್ದಾರೆ. ಈ ನಡುವೆ ಇದೀಗ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವೊಂದಿದೆ ಎಂಬುವುದಾಗಿ ಬಿಜೆಪಿ ಸರಕಾರ ಆಡಳಿತದಲ್ಲಿರುವಾಗಲೇ ಸ್ವ ಪಕ್ಷದ ಸಂಸದ ತೇಜಸ್ವಿ ಸೂರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಅಕ್ರಮವಾಗಿ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಂಸದರು, ಬಿಬಿಎಂಪಿ ಬೆಡ್ ಗಳನ್ನು ಅಕ್ರಮವಾಗಿ ಬುಕ್ ಮಾಡುತ್ತಿದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ನಿರಂತರವಾಗಿ ಬೆಡ್ ಗಳ ಕೊರತೆ ಕಾಣುತ್ತಿದೆ. ಸೋಂಕಿತರಿಗೆ ಬೆಡ್ ಗಳು ಸಿಗದೆ ಸಾವು ನೋವು ಸಂಭವಿಸಿರುವ ಘಟನೆಗಳು ನಡೆದಿದೆ. ಈ ಬಗ್ಗೆ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಉತ್ತರ ಸಿಗದ ಹಿನ್ನೆಲೆ, ತನಿಖೆ ನಡೆಸಿದಾಗ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಮಿತ್ರ ಸಿಬ್ಬಂದಿಗಳು ಬಿಬಿಎಂಪಿ ಹೆಲ್ಪ್ ಲೈನ್ ಹಾಗೂ ಬೆಡ್ ಹಂಚಿಕೆಗೆ ನಿಯುಕ್ತರಾಗಿರುವ ಸಿಬ್ಬಂದಿಗಳು ಭಾಗಿಗಳಾಗಿ ಬೆಡ್ ಮಾಫಿಯಾ ನಡೆಸುತ್ತಿದ್ದಾರೆ ಎಂಬುವುದು ತಿಳಿದುಬಂದಿದೆ ಎಂದು ಸಂಸದರು ತಿಳಿಸಿದ್ದಾರೆ.