ಬೆಂಗಳೂರು, ಮೇ.04 (DaijiworldNews/HR): ಕರ್ನಾಟಕದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಕೊರತೆ ಇರುವ ಸಂದರ್ಭದಲ್ಲಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ ಎಂದರೆ ಏನರ್ಥ? ಈ ಬಗ್ಗೆ ತನಿಖೆ ನಡೆಸುತ್ತೇನೆ, ಆ ಬಳಿಕ ಅದರ ಪರಿಣಾಮವನ್ನು ನೀವೆಲ್ಲರೂ ಎದುರಿಸಬೇಕಾಗುತ್ತದೆ" ಎಂದು ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆದ ಘಟನೆ ನಡೆದಿದೆ.
ರೆಮ್ಡಿಸಿವಿರ್ ಕೊರತೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಇಂದು ತುರ್ತು ಸಭೆ ನಡೆಸಿದ ಅವರು, "ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ದಂಧೆಯಲ್ಲಿ ತೊಡಗಿರುವ ಬಗ್ಗೆ ನನಗೆ ದೂರುಗಳು ಬರುತ್ತಿದ್ದು, ತಪ್ಪು ಮಾಡಿದ ಯಾರನ್ನೂ ಕೂಡ ಸುಮ್ಮನೆ ಬಿಡುವುದಿಲ್ಲ" ಎಂದರು.
ವಿಜಯಪುರದಲ್ಲಿ ರೆಮ್ಡಿಸಿವಿರ್ ಸಂಗ್ರಹ ಇಟ್ಟುಕೊಂಡ ಮತ್ತು ಆಕ್ಸಿಜನ್ ಸಿಲಿಂಡರ್ ಹೆಚ್ಚು ದರಕ್ಕೆ ಮಾಡಿದ ಬಗ್ಗೆ ಆಸ್ಪತ್ರೆ ಮೇಲೆ ಎಫ್ಐಆರ್ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದಾಗ ಕೋಪಗೊಂಡ ಯಡಿಯೂರಪ್ಪ, "ಕಾಳಸಂತೆಯಲ್ಲಿ ಬಹಳ ದುರುಪಯೋಗ ಆಗುತ್ತಿದ್ದು, ಮಾರಾಟ ಮಾಡುತ್ತಿದ್ದಾರೆ. ಹೊರರಾಜ್ಯಗಳಿಗೂ ಮಾರಾಟ ಮಾಡುತ್ತಿದ್ದಾರೆ ಎಂದು ನಮಗೆ ವರದಿ ಬಂದಿದೆ" ಎಂದಿದ್ದಾರೆ.
ಇನ್ನು "ಎಲ್ಲವನ್ನೂ ಮುಚ್ಚಿಟ್ಟುಕೊಂಡು ಯಾರೂ ಮಾತನಾಡಬೇಡಿ, ನಾನು ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುತ್ತೇನೆ. ತನಿಖೆ ಮಾಡಿಸಿದರೆ ಪರಿಣಾಮ ಬಹಳ ಕೆಟ್ಟದಿರುತ್ತದೆ. ಇಂಥ ಕಷ್ಟ ಕಾಲದಲ್ಲಿ ಕಾಳಸಂತೆಯಲ್ಲಿ ಮರಾಟ ಮಾಡಿ ದುರ್ಬಳಕೆ ಮಾಡಿ ದಂಧೆ ಮಾಡಿಕೊಂಡು ಕುಳಿತಿದಿದ್ದರೆ ನಾನು ಸಹಿಸಲ್ಲ" ಎಂದು ಹೇಳಿದ್ದಾರೆ.