ಪಶ್ಚಿಮ ಬಂಗಾಳ, ಮೇ.04 (DaijiworldNews/HR): "ಬಿಜೆಪಿಯವರಿಗೆ ಈಗ ರಾಜಕೀಯ ಆಮ್ಲಜನಕ ಬೇಕು" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರೊತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶವು ಬಿಜೆಪಿಯನ್ನು ಸೋಲಿಸಬಹುದೆಂದು ಸಾಬೀತುಪಡಿಸಿದ್ದು, ಜನರೇ ದಾರಿ ತೋರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಧೈರ್ಯ ಅಥವಾ ಅಹಂಕಾರವನ್ನು ತೋರಿಸಬಾರದು" ಎಂದರು.
ರಾಜ್ಯದ ಕೆಲವು ಭಾಗಗಳಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದ ನಡೆದ ಬಗ್ಗೆ ಮಾತನಾಡಿದ ಅವರು, "ನಾನು ಗೆದ್ದ ಪ್ರದೇಶಗಳಲ್ಲಿ ಬಿಜೆಪಿ ತೊಂದರೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.
ಇನ್ನು ಈ ರೀತಿಯ ಹಿಂಸಾಚಾರಗಳು ಪ್ರತಿ ರಾಜ್ಯದಲ್ಲಿ ನಡೆಯುತ್ತದೆ, ಇದು ಬಿಜೆಪಿಯ ಪ್ರಚಾರ. ನಾನು ಹಿಂಸಾಚಾರವನ್ನು ಸಮರ್ಥಿಸುತ್ತಿಲ್ಲ. ಬಿಜೆಪಿ ಕೋಮು ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ, ಏಕೆಂದರೆ ಅವರ ಸೋಲು ಅವರನ್ನು ಮುಜುಗರಗೊಳಿಸಿದೆ" ಎಂದು ಹೇಳಿದರು.