ನವದೆಹಲಿ, ಮೇ 4 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಉಂಟಾಗಿರುವ ರಾಜಕೀಯ ಹಿಂಸಾಚಾರದ ಹಾಗೂ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ರಾಜ್ಯಪಾಲ ಜಗದೀಪ್ ಧನ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಪಾಲರು, "ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಪಶ್ಚಿಮ ಬಂಗಾಳದಲ್ಲಿ ಉಂಟಾಗುತ್ತಿರುವ ರಾಜಕೀಯ ಹಿಂಸಾಚಾರ ಹಾಗೂ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದುಃಖ ಹಾಗೂ ಆತಂಕ ವ್ಯಕ್ತಪಡಿಸಿದರು" ಎಂದು ಹೇಳಿದ್ದಾರೆ.
ಈ ಟ್ವೀಟ್ ನಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟ್ಯಾಗ್ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರು ಈ ಹಿಂಸಾಚಾರವನ್ನು ಪ್ರಜಾಪ್ರಭುತ್ವ ತಲೆ ತಗ್ಗಿಸುವ, ಅವಮಾನಕಾರಿ ಕೃತ್ಯ ಎಂದು ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ದಿನ ರಾಜಕೀಯ ಹಿಂಸಾಚಾರ ನಡೆದು ಹಲವು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದು, ಸುಮಾರು 4,000 ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರೀಯ ತನಿಖಾ ದಳ ಹಿಂಸಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನು ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ವರದಿ ಕೇಳಿದೆ.