ಬೆಂಗಳೂರು, ಮೇ 04 (DaijiworldNews/MB) : ''ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಲಿದೆ. ಇಡೀ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಜನರ ಜೊತೆಯಲ್ಲಿ ಇರಬೇಕು'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ''ನಾವೆಲ್ಲರೂ ಈ ಕೊರೊನಾ ಸಂದರ್ಭದಲ್ಲಿ ಜಾಗೃತರಾಗಿ ಇರಬೇಕು. ನಾವು ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೋವು, ಕಷ್ಟ ದಲ್ಲಿ ಜೊತೆಯಾಗಬೇಕು. ಜನರಿಗೆ ಏನಾಯಿತು? ಹೇಗೆ ಆಯಿತು ಎಂಬುದನ್ನು ತಿಳಿಯಬೇಕು'' ಎಂದು ಹೇಳಿದರು.
''ಈ ಸರ್ಕಾರದ ಆರೋಗ್ಯ ಸಚಿವರು ರಾಜೀನಾಮೆ ನೀಡುವುದು ಮಾತ್ರವಲ್ಲ. ಈ ಸರ್ಕಾರವೇ ಹೋಗಬೇಕು. 33 ಜನ ಮಂತ್ರಿಗಳು ತಾವು ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಿಗೆ ಹೋಗಲಿಲ್ಲ ಎಂದರೆ ಹೇಗೆ?'' ಎಂದು ಪ್ರಶ್ನಿಸಿದರು.
''ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸತ್ತಿದ್ದಾರೆ ಎಂಬ ಲೆಕ್ಕವಿದೆ. ನಾವು ಬೇರೆ ಕಡೆಯಲ್ಲೂ ಈ ರೀತಯೇ ಜನರು ಸಾಯುತ್ತಿರುವುದನ್ನು ನೋಡುತ್ತಿದ್ದೇವೆ. ಜನರೇ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಅನೇಕ ಮಂದಿ ಕೊರೊನಾ ಭಯದಿಂದಲ್ಲೇ ಸಾವನ್ನಪ್ಪುತ್ತಿದ್ದಾರೆ'' ಎಂದು ಆತಂಕ ವ್ಯಕ್ತಪಡಿಸಿದರು.
''ಚಾಮರಾಜನಗರದಲ್ಲಿ ಸತ್ತವರ ಕುಟುಂಬಕ್ಕೆ ಸಚಿವ ಸುರೇಶ್ ಕುಮಾರ್ ಧೈರ್ಯ ತುಂಬಿದ್ದಾರಾ?'' ಎಂದು ಪ್ರಶ್ನಿಸಿದ ಅವರು,'''ಅವರಿಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟುಕೊಡಲಿ. ರಾಜ್ಯಪಾಲರ ಆಡಳಿತ ಬಂದ ಮೇಲೆ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣ ಮಾಡುತ್ತಾರೆ'' ಎಂದು ಹೇಳಿದರು.
ಇನ್ನು ''ಇದು ರಾಜಕಾರಣ ಮಾಡುವ ಸಂದರ್ಭವಲ್ಲ. ಈಗ ರಾಜಕಾರಣ ಮುಖ್ಯವಲ್ಲ. ಪ್ರತಿಯೊಬ್ಬರನ್ನು ಉಳಿಸಿ, ಆ ಕುಟುಂಬಕ್ಕೆ ಧೈರ್ಯ ತುಂಬಬೇಕು'' ಎಂದು ಹೇಳಿದ ಅವರು, ಪ್ರಸ್ತುತ ಅಧಿಕವಾಗಿ ಯುವಕರು ಸಾವನ್ನಪ್ಪುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.