ಪಾಟ್ನಾ, ಮೇ 04 (DaijiworldNews/MB) : ಕೊರೊನಾ ಸೋಂಕು ತೀವ್ರತರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಮೇ 15 ರ ವರೆಗೆ ಲಾಕ್ಡೌನ್ ಜಾರಿ ಮಾಡಲಾಗಿದೆ.
ಈ ಹಿಂದೆ ಕೊರೊನಾ ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಮಾಡುವಂತೆ ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ಸೂಚನೆ ನೀಡಿತ್ತು.
ಮಂಗಳವಾರ ಲಾಕ್ಡೌನ್ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ''ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮೇ 15ರ ತನಕ ಲಾಕ್ಡೌನ್ ಜಾರಿಯಲ್ಲಿರಲಿದೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ''ನಿನ್ನೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು 2021 ರ ಮೇ 15 ರವರೆಗೆ ಬಿಹಾರದಲ್ಲಿ ಲಾಕ್ ಡೌನ್ ಜಾರಿಗೆ ತರಲು ನಿರ್ಧರಿಸಲಾಗಿದೆ. ಅದರ ವಿವರವಾದ ಮಾರ್ಗಸೂಚಿ ಹಾಗೂ ಇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಕ್ರಮಕೈಗೊಳ್ಳು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ'' ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿದ್ದು, ಒಂದು ದಿನದಲ್ಲೇ 11,407 ಕೊರೊನಾ ಪ್ರಕರಣಗಳು ದಾಖಲಾಗಿದೆ. ಒಟ್ಟು 4,97,640 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2,739 ಮಂದಿ ಸೋಂಕಿತರು ಈವರೆಗೆ ಸಾವನ್ನಪ್ಪಿದ್ದಾರೆ.