ನವದೆಹಲಿ, ಮೇ 4 (DaijiworldNews/MS): ಕೇಂದ್ರ ಸರ್ಕಾರವು ಭಾರತದ ಕೋವಿಡ್ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿದೆ, ಹೀಗಾಗಿ ಈ ಹಂತದಲ್ಲಿ ವೈರಸ್ ಹರಡುವುದನ್ನು ತಡೆಯುವ ಏಕೈಕ ಮಾರ್ಗವೆಂದರೆ "ಸಂಪೂರ್ಣ ಲಾಕ್ ಡೌನ್" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ಟ್ವೀಟ್ ಮಾಡಿದ ರಾಹುಲ್ , "ತನ್ನ 'ನಿಷ್ಕ್ರಿಯತೆ'ಯಿಂದ ಹಲವಾರು ಮುಗ್ಧ ಜನರನ್ನು ಕೊಲ್ಲುತ್ತಿದೆ ಎನ್ನುವುದು ಭಾರತ ಸರ್ಕಾರಕ್ಕೆ ತಿಳಿದಿಲ್ಲ" ಎಂದು ರಾಹುಲ್ ಟೀಕೆ ಮಾಡಿದ್ದಾರೆ.
ಲಾಕ್ ಡೌನ್ ವೇಳೆ ಬಡವರಿಗೆ ನ್ಯಾಯ್ (The Nyuntam Aay Yojana) ಯೋಜನೆ ಅಡಿಯಲ್ಲಿ ಆರ್ಥಿಕ ರಕ್ಷಣೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.2019ರ ವಯನಾಡು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ನ್ಯಾಯ್ ಯೋಜನೆ ಬಗ್ಗೆ ಪ್ರನಾಳಿಕೆಯಲ್ಲಿ ತಿಳಿಸಿತ್ತು. ಇದರ ಅನ್ವಯ ಕೇಂದ್ರ ಸರ್ಕಾರವು ಬಡವರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸುವುದಾಗಿದೆ. ಅಂದ್ರೆ ತೀರಾ ಬಡ ಕುಟುಂಬಗಳಿಗೆ ವರ್ಷಕ್ಕೆ 72,000 ನೀಡುವ ಖಾತ್ರಿ ಯೋಜನೆಯಾಗಿದೆ.
ಕಳೆದ ಹಲವಾರು ವಾರಗಳಿಂದ ರಾಹುಲ್ ಗಾಂಧಿಯೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವ ಬಗ್ಗೆ ತೀವ್ರ ಟೀಕೆ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಾಹಿತಿಯ ಸತ್ಯಾಂಶಗಳನ್ನು ನಿಯಂತ್ರಿಸುತ್ತಿದೆ . ಕೇಂದ್ರ ಸರ್ಕಾರಗಳ "ನೀತಿಗಳು ಪಾರ್ಶ್ವವಾಯುವಿಗೆ ಒಳಗಾಗಿದೆ" ಎಂದು ಅವರು ಆರೋಪಿಸಿದ್ದರು.