ನವದೆಹಲಿ, ಮೇ 04 (DaijiworldNews/MB) : ''ಆನ್ಲೈನ್ ಪಾಠ ನಡೆಸುವ ಶಿಕ್ಷಣ ಸಂಸ್ಥೆಗಳು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದ ಹಲವು ಸೌಲಭ್ಯಗಳು ಈಗ ಒದಗಿಸಲು ಸಾಧ್ಯವಿಲ್ಲದ ಕಾರಣ ಶುಲ್ಕ ಇಳಿಕೆ ಮಾಡಬೇಕು'' ಎಂದು ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.
ದೇಶದಲ್ಲಿ ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕವೇ ತರಗತಿಗಳನ್ನು ನಡೆಸುತ್ತಿದೆ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಹೆಚ್ಚಿಸಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣವಾದರೂ ಯಾವುದೇ ಶುಲ್ಕ ವಿನಾಯಿತಿ ನೀಡಿಲ್ಲ. ಕೊರೊನಾ ಕಾರಣದಿಂದ ಹಲವಾರು ಮಂದಿ ಸಂಕಷ್ಟದಲ್ಲಿದ್ದಾರೆ.
ಈ ಹಿನ್ನೆಲೆ ರಾಜಸ್ಥಾನ ಸರ್ಕಾರ ಕೊರೊನಾ ಅವಧಿಯಲ್ಲಿ ಬೋಧನಾ ಶುಲ್ಕದಲ್ಲಿ ಶೇಕಡ 30ರಷ್ಟು ಕಡಿತಗೊಳಿಸಲು ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ಧ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎನ್.ಖನ್ವೀಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಅವರನ್ನು ಒಳಗೊಂಡ ಪೀಠ, ''ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡುವ ಮೂಲಕ ಜನರ ಕಷ್ಟಕ್ಕೆ ಶಿಕ್ಷಣ ಸಂಸ್ಥೆ ಸ್ಫಂಧಿಸಬೇಕು. ವಿದ್ಯಾರ್ಥಿಗಳ ಹಾಗೂ ಅವರ ಪೋಷಕರಿಗೆ ಶಿಕ್ಷಣ ಸಂಸ್ಥೆಗಳು ನೆರವಾಗಬೇಕು'' ಎಂದು ಹೇಳಿದೆ.
ಇನ್ನು ''ಸರ್ಕಾರ ಇಂಥಹ ಆದೇಶ ಹೊರಡಿಸಬೇಕೆಂದು ಕಡ್ಡಾಯವೇನಿಲ್ಲ'' ಎಂದು ಕೂಡಾ ಹೇಳಿರುವ ಸುಪ್ರೀಂ ಕೋರ್ಟ್, ''ಆದರೆ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಇಳಿಸಬೇಕು. ಆನ್ಲೈನ್ ಪಾಠದ ಸಂದರ್ಭ ವಿದ್ಯಾರ್ಥಿಗಳಿಗೆ ಕ್ಯಾಂಪಸ್ನಲ್ಲಿ ನೀಡುವ ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ. ಹಾಗಿರುವಾಗ ವಿದ್ಯಾರ್ಥಿಗಳಿಗೆ ಒದಗಿಸದ ಸೌಲಭ್ಯಗಳಿಗೆ ಶುಲ್ಕ ವಿಧಿಸುವುದು ಸರಿಯಲ್ಲ. ವಿದ್ಯಾರ್ಥಿಗಳು ಅನಿವಾರ್ಯ ಕಾರಣದಿಂದ ಸೌಲಭ್ಯ ಪಡೆಯಲು ಸಾಧ್ಯವಾಗದಿದ್ದಾಗಲೂ ಶುಲ್ಕ ವಿಧಿಸುವಂತಿಲ್ಲ. ಈ ಲಾಭಕೋರತನವನ್ನು ನಿಲ್ಲಿಸಬೇಕು'' ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
''ಸಂಪೂರ್ಣ ಲಾಕ್ಡೌನ್ನಿಂದಾಗಿ 2020-21ರ ಅವಧಿಯಲ್ಲಿ ಶಾಲೆಗಳು ತೆರೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಶಾಲಾ ಆಡಳಿತ ಮಂಡಳಿಗಳಿಗೆ ಪೆಟ್ರೋಲ್/ಡೀಸೆಲ್, ವಿದ್ಯುತ್, ನಿರ್ವಹಣೆ ವೆಚ್ಚ, ನೀರಿನ ಶುಲ್ಕ, ಸ್ವಚ್ಛತೆ ವೆಚ್ಚ ಹೀಗೆ ಹಲವು ಖರ್ಚುವೆಚ್ಚಗಳು ಕಡಿಮೆಯಾಗಿವೆ. ಹೀಗಿರುವಾಗ ಯಾವುದೇ ಸೌಲಭ್ಯ ಒದಗಿಸದೆ ಅವುಗಳ ನಿರ್ವಹಣೆಗೆ ಶುಲ್ಕ ನೀಡುವಂತೆ ಕಡ್ಡಾಯಪಡಿಸುವುದು ಲಾಭಕೋರ ನೀತಿ ಮತ್ತು ವಾಣಿಜ್ಯೀಕರಣವಲ್ಲದೇ ಬೇರೇನೂ ಅಲ್ಲ'' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ.