ಬೆಂಗಳೂರು, ಮೇ.04 (DaijiworldNews/HR): ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಗಳು ಕೂಡ ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ತಮ್ಮ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ, ನೋಡಲ್ ಅಧಿಕಾರಿಯನ್ನು ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿಯ ಎನ್ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಕೊರೊನಾದಿಂದ ತಂದೆ-ತಾಯಿಯನ್ನು, ಪೋಷಕರನ್ನು ಕಳೆದುಕೊಂಡಂತಹ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವುದು ಅವಶ್ಯಕವಾಗಿದ್ದು, ಅಂತಹ ಅನಾಥ ಮಕ್ಕಳಿಗೆ ಸರ್ಕಾರದಿಂದ ಅತ್ಯಾವಶ್ಯಕ ಸೌಕರ್ಯಗಳನ್ನು ಆಧ್ಯತೆಯ ಆಧಾರದ ಮೇಲೆ ಒದಗಿಸುವ ಸಲುವಾಗಿ, ಅಗತ್ಯ ಕ್ರಮವಹಿಸಲು ಕೆಪಿ ಮೋಹನ್ ರಾಜ್, ಭಾಆಸೇ, ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು, ಇವರನ್ನು ರಾಜ್ಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇನ್ನು ಈ ಆದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ 2005ರಲ್ಲಿನ ಸೆಕ್ಷನ್ 24(ಇ) ಮತ್ತು (ಎಲ್)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರ ನಿರ್ದೇಶನದಂತೆ ಹೊರಡಿಸಿದ್ದಾರೆ.